ಮಂಗಳೂರು: ಮ್ಯಾನೇಜರ್ ಓರ್ವ ತಾನು ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕ್ ಗೆ ವಂಚಿಸಿದ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಆಫ್ ಬರೋಡಾದ ಕೊಣಾಜೆ ಬ್ರಾಂಚ್ನ ಮ್ಯಾನೇಜರ್ ಡೆರಿಕ್ ಅಜಿತ್ ಡಿಸೋಜ ಬಂಧಿತ ಆರೋಪಿ. ಈತ 2022ರ ಸೆಪ್ಟಂಬರ್ 22ರಿಂದ 2024ರ ಫೆಬ್ರವರಿ 7ರವರೆಗೆ ಮ್ಯಾನೇಜರ್ ಆಗಿದ್ದು, ಈ ಸಂದರ್ಭ ಬ್ಯಾಂಕಿನ ಹಿರಿಯ ನಾಗರಿಕರು ಠೇವಣಿಯಲ್ಲಿ ಇಟ್ಟಿದ್ದ ಹಣವನ್ನು ಖಾತೆದಾರರಿಗೆ ತಿಳಿಯದಂತೆ ಒಂದು ಕೋಟಿಗೂ ಅಧಿಕ ಹಣವನ್ನು ಸಾಲ ರೂಪದಲ್ಲಿ ಇತರ ಆರೋಪಿಗಳ ಖಾತೆಗೆ ವರ್ಗಾಯಿಸಿದ್ದಾನೆ ಎನ್ನಲಾಗುತ್ತಿದೆ.
ಬ್ಯಾಂಕಿನಲ್ಲಿ ನಿರಖು ಠೇವಣಿಯಲ್ಲಿಡುವಂತೆ ಖಾತೆದಾರರು ತಿಳಿಸಿದ್ದರೂ ಕೂಡ ಅವರ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಕಂಪ್ಯೂಟರ್ ಪ್ರಿಂಟೆಡ್ ನಿರಖು ಠೇವಣಿ ರಶೀದಿ ಇದ್ದರೂ ಕೂಡ ಆರೋಪಿಯು ಅದನ್ನು ಖಾತೆದಾರರಿಗೆ ನೀಡದೆ ತಾನೇ ಸೃಷ್ಟಿಸಿದ್ದ ಕೈ ಬರಹದಲ್ಲಿರುವ ನಕಲಿ ನಿರಖು ಠೇವಣಿ ರಶೀದಿಗಳನ್ನು ನೀಡಿ ಅವರ ಖಾತೆಗಳಲ್ಲಿದ್ದ 67,94,000 ರೂ.ವನ್ನು ಇತರ ಆರೋಪಿತರ ಖಾತೆಗೆ ಜಮೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


