ಮಂಗಳೂರು: ಕಳೆದ 24 ಗಂಟೆಗಳ ಅವಧಿಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ 3 ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕ ವಸ್ತು ಹಾಗೂ ಅಕ್ರಮ ಪಿಸ್ತೂಲ್ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಕೇರಳ- ಕರ್ನಾಟಕದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ 5 ಮಂದಿ ಅಂತಾರಾಜ್ಯ ಕ್ರಿಮಿನಲ್ಗಳನ್ನು ಬಂಧಿಸಿದ್ದಾರೆ.
ಮೂರು ಪಿಸ್ತೂಲ್ ಮತ್ತು 3 ಕಾರುಗಳು, 6 ಸಜೀವ ಮದ್ದು ಗುಂಡುಗಳು ಹಾಗೂ 12 ಕೆಜಿಗೂ ಅಧಿಕ ಗಾಂಜಾ ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಟೆಕಲ್, ತಲಪಾಡಿ, ಅರ್ಕುಳದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಆರೋಪಿತರ ಪೈಕಿ ಒಬ್ಬಾತನಿಗೆ ನಿಷೇಧಿತ ಪಿಎಫ್ಐ ಸಂಘಟನೆಯ ಜೊತೆ ನಂಟು ಇದೆ ಎಂಬ ಆರೋಪವಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇನ್ನು ದೇರಳಕಟ್ಟೆ ಸಮೀಪದ ನಾಟೆಕಲ್ ಬಳಿ ಸ್ಥಾರ್ಪಿಯೋ ಕಾರೊಂದು ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಾ.12ರಂದು ದಾಳಿ ನಡೆಸಿ ಕಾರಿನಲ್ಲಿದ್ದ ಕಾಸರಗೋಡು ಜಿಲ್ಲೆಯ ಕಕ್ಕಾಡಿನಗತ್ ಮನೆಯ ನೌಫಲ್(38), ಪೈವಳಿಕೆ ಗ್ರಾಮದ ಮನ್ಸೂರ್(36) ಎಂಬವರನ್ನು ಬಂಧಿಸಿದ್ದಾರೆ.
ಇವರಲ್ಲಿದ್ದ 2 ಪಿಸ್ತೂಲ್ ಗಳು, 4 ಸಜೀವ ಮದ್ದುಗುಂಡುಗಳು, 2 ಮೊಬೈಲ್ ಪೋನುಗಳು, ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ 14,60,000 ರೂ. ಆಗಿದೆ. ಈ ಬಗ್ಗೆ ಕೊಣಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


