ಕಾರ್ಕಳ: ಸಂಸ್ಕೃತಿಗೆ ಸಂಬಂಧಿಸಿದ ಮತ್ತು ಕರಾವಳಿಗರು ಹೆಚ್ಚು ಆದ್ಯತೆ ನೀಡುವ ಕಂಬಳ ಕ್ರೀಡೆ ಜಾತಿ, ಮತ, ಧರ್ಮವನ್ನು ಮೀರಿಸಿದೆ. ಕಂಬಳ ಕರಾವಳಿಗರ ಪ್ರತಿಷ್ಠೆ ಮತ್ತು ಈ ಮಣ್ಣಿನ ಹೆಮ್ಮೆಯ ವಿಚಾರ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಇಪ್ಪತ್ತೊಂದನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಇವರು ಮಾತನಾಡಿದರು. ಅಚ್ಚುಕಟ್ಟಾದ ವ್ಯವಸ್ಥೆಯನ್ನು ನಿಭಾಯಿಸುವಲ್ಲಿ ದ.ಕ, ಉಡುಪಿ ಅಗ್ರಮಾನ್ಯ ಸ್ಥಾನದಲ್ಲಿದೆ ಎಂದು ಅವರು ಕೊಂಡಾಡಿದರು.
ಈ ಸಂದರ್ಭ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಂಬಳ ಸಮಿತಿ ಅಧ್ಯಕ್ಷ, ಶಾಸಕ ವಿ. ಸುನಿಲ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


