ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿರುವ ಸುಂದರ ದೇಶ. ಇಲ್ಲಿ ಬೇರೆ ಬೇರೆ ಧರ್ಮದ ಜನರು ಅವರ ಸಂಪ್ರದಾಯಕ್ಕೆ ತಕ್ಕಂತೆ ದೇವರ ಪೂಜೆ-ಪುರಸ್ಕಾರಗಳನ್ನು ನಿರ್ವಹಿಸುತ್ತಾರೆ. ಹಿಂದೂ ಧರ್ಮದಲ್ಲಿ ದೇವರ ಪೂಜೆ, ದೀಪ ಇಡುವುದು ಇವೆಲ್ಲವೂ ಅತ್ಯಂತ ಮುಖ್ಯವಾದ ಧಾರ್ಮಿಕ ವಿಧಾನ. ಇದನ್ನು ಮಾಡುವಾಗ ನಾವು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ದೇವರ ಕೋಣೆ ವಾಸ್ತು ಪ್ರಕಾರ ಮನೆಯೊಳಗೆ ಯಾವ ದಿಕ್ಕಿನಲ್ಲಿ ಇರಬೇಕೋ ಅಲ್ಲಿದ್ದರೆ ಚಂದ. ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ದೇವರ ಕೋಣೆ ಇದ್ದರೆ ಒಳ್ಳೆಯದು. ಇದರ ದಿಕ್ಕೇ ತಪ್ಪಾಗಿದ್ದರೆ ಪೂಜೆಯ ಪ್ರಯೋಜನ ಲಭಿಸುವುದಿಲ್ಲ ಎಂದು ನಂಬಿಕೆಯಿದೆ.
ಪೂಜೆಯ ಮೊದಲು ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಕು. ಮತ್ತು ನಾವು ಕೂಡಾ ದೈಹಿಕವಾಗಿ, ಮಾನಸಿಕವಾಗಿ ನಿರ್ಮಲತೆಯನ್ನು ಕಾಪಾಡಿಕೊಳ್ಳಬೇಕು. ಮತ್ತು ಸರಿಯಾದ ಸಮಯಕ್ಕೆ ಪೂಜೆ ಮಾಡಿ ಮುಗಿಸಬೇಕು. ಬೆಳಗಿನ ಪೂಜೆಯನ್ನು ಮಧ್ಯಾಹ್ನ ಮಾಡಿದರೆ ವ್ಯರ್ಥ.
ಪೂಜೆ ಮಾಡುವಾಗ ವಿಗ್ರಹಕ್ಕೆ ಬೆನ್ನು ಹಾಕಿ ಕೂರಬಾರದು. ಅದು ತಪ್ಪು. ಮತ್ತು ಪೂರ್ವ ದಿಕ್ಕಿನಲ್ಲೇ ಕೂತು ಪೂಜೆ ಸಲ್ಲಿಸಬೇಕು.

