ಉಡುಪಿ: ಕಾರಿಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಕಾರು ಕಂದಕಕ್ಕೆ ಉರುಳಿದ ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿ ೬೬ರ ನಿಟ್ಟೂರು ಪೆಟ್ರೋಲ್ ಪಂಪ್ ನ ಹಿಂಭಾಗ ಸಂಭವಿಸಿದೆ.
ಕಾರಿನಲ್ಲಿದ್ದ ನಾಗರಾಜ್, ಅಭಿಜಿತ್ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ. ಸಂತೆಕಟ್ಟೆಯ ಖಾಸಗಿ ಸೊಸೈಟಿಯ ಸಿಬ್ಬಂದಿ ಕಾರಿನಲ್ಲಿ ಉಡುಪಿಯಿಂದ ಸಂತೆಕಟ್ಟೆ ಶಾಖೆಗೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಅವಘಡಕ್ಕೆ ಕಾರಣವಾದ ಟಿಪ್ಪರ್ ಚಾಲಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಉಡುಪಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

