ಉಡುಪಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟು ನಂತರ ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದ ಗರುಡ ಗ್ಯಾಂಗ್ ನ ಸಕ್ರಿಯ ಸದಸ್ಯ ಇಸಾಕ್ ನನ್ನು ಮಣಿಪಾಲ ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಒಂಭತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸಾರ್ವಜನಿಕರ ಕಾರು, ಬೈಕಿಗೆ ಗುದ್ದಿ ಎಸ್ಕೇಪ್ ಆಗಿದ್ದ ಇಸಾಕ್ ನನ್ನು ಮಣಿಪಾಲ ಪೊಲೀಸರು ಹಾಸನದಲ್ಲಿ ಅರೆಸ್ಟ್ ಮಾಡಿದ್ದರು. ಅಲ್ಲಿಂದ ಆತನನ್ನು ಕರೆ ತರುವಾಗ ಹಿರಿಯಡ್ಕದಲ್ಲಿ ಮತ್ತೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಟ್ರೈ ಮಾಡಿದ್ದ. ಆ ಸಂದರ್ಭ ಅವನ ಕಾಲಿಗೆ ಪೊಲೀಸರು ಗುಂಡೇಟು ಹಾಕಿದ್ದು ಶಸ್ತ್ರಚಿಕಿತ್ಸೆಗಾಗಿ ಅವನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವ ಕಾರಣ ಕೋರ್ಟ್ ಗೆ ಹಾಜರುಪಡಿಸಿದ್ದು ಎಪ್ರಿಲ್ ಒಂದರವರೆಗೆ ಪೊಲೀಸ್ ಕಸ್ಟಡಿಗೆ ನೀಡಲು ಕೋರ್ಟ್ ಆದೇಶ ನೀಡಿದೆ. ಇದೀಗ ಆತನನ್ನು ಕಸ್ಟಡಿಗೆ ಪಡೆದುಕೊಂಡಿರುವ ಮಣಿಪಾಲ ಪೊಲೀಸರು ದರೋಡೆ, ಮಾದಕ ದ್ರವ್ಯ ಸೇರಿದಂತೆ ವಿವಿಧ ವಿಚಾರಗಳಲ್ಲಿ ತನಿಖೆ ನಡೆಸಲಿದ್ದಾರೆ.


