ಹೆಬ್ರಿ: ಮಾರುತಿ ಸ್ವಿಫ್ಟ್ ಹಾಗೂ ಬೊಲೆರೋ ವಾಹನ ಮುಖಾಮುಖಿ ಢಿಕ್ಕಿಯಾಗಿ ಓರ್ವ ಪ್ರಯಾಣಿಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಹೆಬ್ರಿ ಜಕ್ಕನಮಕ್ಕಿ ಬಳಿ ಹೆದ್ದಾರಿಯಲ್ಲಿ ಮಾ. 28ರಂದು ಸಂಭವಿಸಿದೆ.
ಸ್ವಿಫ್ಟ್ ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಬಸ್ತೆವ್ (53) ಎಂಬಾತ ಮೃತ ದುರ್ದೈವಿ. ಉಳಿದ ನಾಲ್ಕು ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ.

ಸಾಗರದಿಂದ ಮಣಿಪಾಲ ಆಸ್ಪತ್ರೆಗೆ ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದು, ಬೊಲೆರೊ ವಾಹನ ಆಗುಂಬೆ ಕಡೆಗೆ ಹೋಗುತ್ತಿದ್ದ ವೇಳೆ ಜಕ್ಕನಮಕ್ಕಿ ಅಪಾಯಕಾರಿ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೊಲೆರೊ ವಾಹನದಲ್ಲಿ ರೈಲ್ವೇ ಪೊಲೀಸರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಎಲ್ಲಾ ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಠಾಣಾಧಿಕಾರಿ ಮಹೇಶ್ ಟಿ ಎಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

