ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ನೆತ್ತಿ ಸುಡುವ ಬಿಸಿಲ ಧಗೆಯಿಂದ ಜನರು ಹೈರಾಣಾಗಿದ್ದಾರೆ. ಇದೀಗ ಸೈಕ್ಲೋನ್ ನ ಪರಿಣಾಮದಿಂದ ರಾಜ್ಯದಲ್ಲಿ ಮತ್ತೆ ಮಳೆಯ ಮುನ್ಸೂಚನೆ ಬಂದಿದೆ. ಗುಡುಗು ಸಿಡಿಲು, ಭಾರೀ ಗಾಳಿ ಸಹಿತ ಎಪ್ರಿಲ್ ಆರರವರೆಗೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದ.ಕ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆ ಇದೆ.
ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಬಿಸಿಲಿನ ತಾಪಮಾನ ಇಳಿಕೆಯಾಗಲಿದೆ. ಇದರಿಂದ ಬಿಸಿಲ ಬೇಗೆಯಿಂದ ಕಂಗೆಟ್ಟ ಜನರಿಗೆ ಮತ್ತು ಕೃಷಿಕರಿಗೆ ಸ್ವಲ್ಪ ನಿರಾಳವೆನಿಸಲಿದೆ.

