ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಅವರಿಗೆ ಸಿನಿಮಾದ ಜೊತೆಗೆ ಕ್ರಿಕೆಟ್ ಅಂದರೆ ಕೂಡಾ ಪಂಚಪ್ರಾಣ. ಇದೀಗ ಅವರು ತಮ್ಮ ನೆಚ್ಚಿನ ಐಪಿಎಲ್ ಕ್ರಿಕೆಟ್ ಟೀಂನ ಬಗ್ಗೆ ಹಾಡಿ ಹೊಗಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿರುವ ನಟ ಶಿವಣ್ಣ ಐಪಿಎಲ್ ಪ್ರಾರಂಭವಾಗಿ ಇದೀಗ ಹದಿನೆಂಟು ವರ್ಷ. ಈ 18 ವರ್ಷಗಳಲ್ಲಿ ಆರ್ಸಿಬಿ ಹೇಗೇ ಆಡಲಿ ನಾವು ಸಪೋರ್ಟ್ ಮಾಡಿದ್ದೇವೆ. ಆರ್ಸಿಬಿ ಕಂಡರೆ ಅದೇನೋ ಜೋಶ್, ಒಂದು ಉತ್ಸಾಹ ಬರುತ್ತದೆ. ಅದೇನೋ ಗೊತ್ತಿಲ್ಲ ಆರ್ಸಿಬಿ ಎಂದರೆ ನಮಗೆ ಜೀವ, ನಮ್ಮ ಪ್ರಾಣ ಎಂದಿದ್ದಾರೆ.
ಬೆಂಗಳೂರು, ನಮ್ಮ ಭಾಷೆ, ನಮ್ಮ ಸಂಸ್ಕೃತಿಗಳನ್ನು ಈ ಟೀಂ ಪ್ರತಿನಿಧಿಸುವುದರಿಂದ ಮನಸ್ಸಿಗೆ ಸಂತೋಷ ನೀಡುತ್ತದೆ. ಮತ್ತೆ ಆರ್ಸಿಬಿಯವರು ಯಾವಾಗ ಆಡಿದರೂ ಒಂದು ಜೋಶ್ನಲ್ಲಿ ಆಡುತ್ತಾರೆ. ಹೀಗಾಗಿ 18ನೇ ಸೀಸನ್ನಲ್ಲಿ ಆರ್ಸಿಬಿಗೆ ಒಳ್ಳೆಯದಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನೀವು ಹೋಗಿ ಮ್ಯಾಚ್ ಅನ್ನು ಎಂಜಾಯ್ ಮಾಡಿ ಎಂದು ಅಭಿಮಾನಿಗಳಿಗೆ ಶಿವಣ್ಣ ಕರೆ ನೀಡಿದ್ದಾರೆ.


