ರಾತ್ರಿ ಮಲಗುವಾಗ ಸಾಮಾನ್ಯವಾಗಿ ನಾವು ಮೊಬೈಲ್ ಬಳಸುತ್ತೇವೆ. ಬೆಳಕು ಆರಿಸಿದ ಮೇಲೂ ಕೂಡಾ ನಾವು ಮೊಬೈಲ್ ನೋಡುತ್ತೇವೆ. ಇದು ಕಣ್ಣಿಗೆ ಹಾನಿ ಮಾಡುವುದಲ್ಲದೆ ಆರೋಗ್ಯದ ಮೇಲೂ ಕೂಡಾ ದುಷ್ಪರಿಣಾಮ ಬೀರುತ್ತದೆ.
ರೀಲ್ಸ್ ನೋಡುವ ಅಭ್ಯಾಸ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಕೂಡಾ ಪರಿಣಾಮ ಬೀರುತ್ತದೆ. ರಾತ್ರಿಯಲ್ಲಿ ನಮ್ಮ ಮೆದುಳು ವಿಶ್ರಾಂತಿ ಬಯಸುವಾಗ ನಾವು ರೀಲ್ಸ್ ನೋಡುತ್ತಾ ಸಮಯ ಕಳೆದರೆ ಮೆದುಳು ಗೊಂದಲಕ್ಕೀಡಾಗುತ್ತದೆ.
ತಡರಾತ್ರಿಯವರೆಗೂ ಮೊಬೈಲ್ ಸ್ಕ್ರೀನ್ ನೋಡುತ್ತಿದ್ದರೆ ರಕ್ತದೊತ್ತಡದ ಮಟ್ಟ ಕೂಡಾ ಅಧಿಕವಾಗುತ್ತದೆಯಂತೆ. ವಿಶೇಷವಾಗಿ ಒತ್ತಡ, ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆಯಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ನಿದ್ರಾಹೀನತೆಯು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿದೆ.
ಫೋನ್ ನ ನೀಲಿ ಬೆಳಕು ಕಣ್ಣಿಗೂ ಒತ್ತಡವನ್ನು ಉಂಟುಮಾಡುತ್ತದೆ. ಮಲಗಿ ಮೊಬೈಲ್ ಬಳಕೆ ಮಾಡುವುದರಿಂದ ಕುತ್ತಿಗೆ, ಭುಜ ನೋವು ಸಹಿತ ತಲೆನೋವು ಬಾಧಿಸುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದ್ದರಿಂದ ಮಧ್ಯರಾತ್ರಿಯವರೆಗೆ ಮೊಬೈಲ್ ಬಳಕೆ ಮಾಡುವುದನ್ನು ನಿಯಂತ್ರಿಸಿಕೊಂಡರೆ ಒಳ್ಳೆಯದು.

