ಬೆಂಗಳೂರು: ಶಿಕ್ಷಣ ಇಲಾಖೆ ಮಕ್ಕಳ ಪೋಷಕರಿಗೆ ಇದೀಗ ಬಿಗ್ ರಿಲೀಫ್ ನೀಡಿದೆ. ಈ ಹಿಂದೆ ಆರು ವರ್ಷವಾಗಿದ್ದರೆ ಮಾತ್ರ ಶಾಲೆಗೆ ಸೇರಿಸಬೇಕೆಂಬ ಕಠಿಣ ಕ್ರಮವಿತ್ತು. ಆದರೆ ಈ ಕ್ರಮವನ್ನು ಸಡಿಲಗೊಳಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಆದೇಶ ಹೊರಡಿಸಿದ್ದಾರೆ.
ಇನ್ಮುಂದೆ ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗಿರುವ ವಯೋಮಿತಿಯನ್ನು ಕರ್ನಾಟಕ ಶಿಕ್ಷಣ ಇಲಾಖೆ ಸಡಿಲಗೊಳಿಸಿದೆ. ಐದು ವರ್ಷ ಐದು ತಿಂಗಳಾಗಿದ್ದರೂ ಕೂಡಾ ಶಾಲೆಗೆ ಸೇರಿಸಲು ಈ ವರ್ಷ ಅವಕಾಶ ನೀಡಲಾಗುತ್ತದೆ. ಈ ಬಗ್ಗೆ ಶಿಕ್ಷಣ ಸಚಿವರೇ ಘೋಷಣೆ ಮಾಡಿದ್ದಾರೆ.
ಒಂದು ಮಾನದಂಡವೆಂದರೆ ಒಂದನೇ ತರಗತಿ ಸೇರಲು ಕಡ್ಡಾಯವಾಗಿ ಯುಕೆಜಿ ಆಗಿರಬೇಕು. ಆದರೆ ಈ ನಿಯಮ ಕೇವಲ ಈ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ. ಪೋಷಕರ ಒತ್ತಾಯದ ಮೇರೆಗೆ ಈ ಕ್ರಮ ಅನುಷ್ಠಾನಕ್ಕೆ ತರಲಾಗುತ್ತಿದೆ. ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳು ಒಂದನೇ ತರಗತಿ ಸೇರಲು ಕಡ್ಡಾಯವಾಗಿ ಆರು ವರ್ಷ ತುಂಬಿರಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ.


