ಮಂಗಳೂರು: ಮಂಗಳೂರಿನಲ್ಲಿ ಕರಾವಳಿಗರನ್ನೇ ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ವರದಿಯಾಗಿದೆ. ಹೊರ ರಾಜ್ಯದ ಯುವತಿ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು ಮಂಗಳೂರಿಗರನ್ನು ದಿಗ್ಭ್ರಮೆಗೊಳಿಸಿದೆ. ಮಂಗಳೂರು ಹೊರ ವಲಯದ ಕಲ್ಲಾಪುವಿನ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಅಂತರರಾಜ್ಯ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಉಳ್ಳಾಲ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ.
ಮುಲ್ಕಿ ಮೂಲದ ಆಟೋ ಚಾಲಕ ಪ್ರಭುರಾಜ್, ಮಣಿ ಮತ್ತು ಕುಂಪಲ ನಿವಾಸಿ ಮಿಥುನ್ ಬಂಧಿತ ಆರೋಪಿಗಳು. ಸಂತ್ರಸ್ತ ಯುವತಿ ಮೂಲತಃ ಪಶ್ಚಿಮ ಬಂಗಾಳದವಳಾಗಿದ್ದು ಮಂಗಳೂರಿನಲ್ಲಿ ಪರಿಚಯವಾದ ಆಟೋ ಚಾಲಕ ಮತ್ತು ಆತನ ಸ್ನೇಹಿತರು ಆಕೆಯ ಮೇಲೆರಗಿದ್ದಾರೆ ಎಂದು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಳೆ.
ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪ್ರಕರಣದ ಬಗ್ಗೆ ಇಂಚಿಂಚು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾತನಾಡಿ ಕಾಮುಕರು ಯುವತಿಗೆ ಚೆನ್ನಾಗಿ ಮದ್ಯಪಾನ ಮಾಡಿಸಿ, ಪ್ರಜ್ಞೆ ತಪ್ಪಿಸಿ ಕೃತ್ಯ ಎಸಗಿದ್ದಾರೆ. ವೈದ್ಯಕೀಯ ವರದಿ ಬಂದ ಬಳಿಕ ದೃಢೀಕರಿಸಲಾಗುವುದು ಎಂದು ಹೇಳಿದ್ದಾರೆ.

