ಉಡುಪಿ: ಇಲ್ಲಿನ ಸಂತೆಕಟ್ಟೆ ವೆಹಿಕ್ಯುಲರ್ ಓವರ್ ಪಾಸ್ ಕಾಮಗಾರಿ ಕಳೆದ ಅನೇಕ ವರ್ಷಗಳಿಂದಲೂ ವಿಳಂಬ ಗತಿಯಲ್ಲೇ ಸಾಗುತ್ತಿದೆ. ಇನ್ನೂ ಪೂರ್ಣಗೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಆದ್ದರಿಂದ ಈ ಬಾರಿಯೂ ಕಾಮಗಾರಿ ಪೂರ್ಣಗೊಳ್ಳೋದು ಅನುಮಾನ.
ಇಲ್ಲಿನ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸಂಚಾರಕ್ಕೂ ಕಷ್ಟವಾಗುತ್ತಿದೆ. ಇನ್ನು ಮಳೆಗಾಲದಲ್ಲಂತೂ ಪರಿಸ್ಥಿತಿ ತೀರಾ ಹದಗೆಟ್ಟಿರುತ್ತದೆ. ಸಂಸದರ, ಶಾಸಕರ ಒತ್ತಡವಿದ್ದರೂ ಕೂಡಾ ಇನ್ನೂ ಕಾಮಗಾರಿ ವೇಗ ಪಡೆದುಕೊಂಡಿಲ್ಲ ಯಾಕೆ ಎಂಬ ಯಕ್ಷಪ್ರಶ್ನೆ ಜನಸಾಮಾನ್ಯರಲ್ಲಿ ಕಾಡುತ್ತಿದೆ.
ಕಾಂಕ್ರೀಟ್ ರಸ್ತೆ, ರಿಟೈನಿಂಗ್ ವಾಲ್ ನಿರ್ಮಾಣ ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ವಾಹನ ಸವಾರರಿಗೂ ಕಿರಿಕಿರಿ ಎನಿಸುತ್ತಿದೆ. ಅಲ್ಲಿದ್ದ ಸೂಚನಾ ಫಲಕವೂ ನಾಪತ್ತೆಯಾಗಿದ್ದು ಹೆದ್ದಾರಿಯಲ್ಲೂ ಗುಂಡಿಗಳು ರಚನೆಯಾಗಿದೆ. ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ತಿಗೊಳಿಸಿ ಸುಲಲಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ವಾಹನ ಸವಾರರು ಒತ್ತಾಯಿಸಿದ್ದಾರೆ.

