ಬ್ರಹ್ಮಾವರ: ಸ್ಕೂಟರ್ ಗೆ ದನ ಅಡ್ಡ ಬಂದ ಪರಿಣಾಮ ಕಂಟ್ರೋಲ್ ತಪ್ಪಿ ಬಿದ್ದು ಸವಾರ ದಾರುಣ ಅಂತ್ಯ ಕಂಡ ಘಟನೆ ಉಡುಪಿಯ ಉಪ್ಪೂರು ಗ್ರಾಮದ ಕೊಳಲಗಿರಿ-ಆರೂರು ರಸ್ತೆಯ ಶ್ರೀ ವೀರಾಂಜನೇಯ ಭಜನಾ ಮಂದಿರದ ಬಳಿ ನಡೆದಿದೆ.
ಮಣಿಪಾಲ ಹೋಟೇಲ್ ಒಂದರ ಮ್ಯಾನೇಜರ್, ನಲ್ವತ್ನಾಲ್ಕು ವರ್ಷದ ಪ್ರವೀಣ್ ಸಾಲ್ಯಾನ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇವರು ದ್ವಿಚಕ್ರ ವಾಹನದಲ್ಲಿ ಮಣಿಪಾಲದಿಂದ ನೀಲಾವರದ ಆರೂರು ಕಡೆ ಹೋಗುತ್ತಿದ್ದರು.
ರಸ್ತೆಯಲ್ಲಿ ಅವರಿಗೆ ದನ ಅಡ್ಡ ಬಂದಿದ್ದು ಕೂಡಲೇ ಅವರು ಬ್ರೇಕ್ ಹಾಕಿದ್ದಾರೆ. ಆಗ ಅವರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದರು. ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಸಾವನ್ನಪ್ಪಿದ್ದಾರೆ.

