ಉಡುಪಿ : ಕಾರ್ಕಳ ತಾಲೂಕಿನಲ್ಲಿ ಉದ್ಯಮಿಯೋರ್ವರು ಕಾರಿನೊಳಗೆ ಕುಳಿತು ಸ್ವಯಂ ತಾನೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ನಸುಕಿನ ಜಾವ ಘಟನೆ ನಡೆದಿದ್ದು, ದಿಲೀಪ್ ಎನ್ ಆರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಕಾರ್ಕಳದ ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿಯ ಎಸ್ಟೇಟ್ ಮುಂಭಾಗ ಕಾರು ನಿಲ್ಲಿಸಿ ದಿಲೀಪ್ ಎನ್ ಆರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಕಿರು ಉದ್ಯಮ ನಡೆಸುತ್ತಿದ್ದ ದಿಲೀಪ್ ಆತ್ಮಹತ್ಯೆಗೆ ಉದ್ಯಮ ನಷ್ಟ ಹಾಗೂ ವಿಪರೀತ ಸಾಲ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಕೆಲ ವರ್ಷಗಳಿಂದ ಕುಟುಂಬದ ಜೊತೆ ಮಂಗಳೂರಿನಲ್ಲಿ ವಾಸವಾಗಿದ್ದರು.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿ ಸ್ವೀಟ್ ಬಾಕ್ಸ್ , ರಿವಾಲ್ವರ್ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.

