ಮಂಗಳೂರು: ಫಾಝಿಲ್ ಕೊಲೆ ಪ್ರಕರಣದ ಆರೋಪಿ ರೌಡಿಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ(32) ಎಂಬಾತನನ್ನು ನಾಲ್ವರ ತಂಡ ತಲವಾರಿನಲ್ಲಿ ಕೊಚ್ಚಿ ಕೊಲೆಗೈದ ಘಟನೆ ನಗರದ ಹೊರವಲಯದ ಬಜೆ ಕಿನ್ನಿಪದವು ಎಂಬಲ್ಲಿ ಇಂದು ರಾತ್ರಿ 8.30 ಸುಮಾರಿಗೆ ನಡೆದಿದೆ.
ಎರಡು ವರ್ಷಗಳ ಹಿಂದೆ ನಡೆದಿದ್ದ ಸುರತ್ಕಲ್ನಲ್ಲಿ ಫಾಜಿಲ್ ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ, ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯ ಸುಹಾಸ್ ಶೆಟ್ಟಿ ಕೊಲೆಯಾದವನು.
ಸುಹಾಸ್ ಶೆಟ್ಟಿ ಇನ್ನೋವಾ ಕಾರ್ ನಲ್ಲಿ ಬಜ್ಪೆಯ ಕಿನ್ನಿಕಂಬಳ ಬಳಿ ಹೋಗುತ್ತಿರುವ ಸಂಧರ್ಭ, ಅದನ್ನೇ ಬೆನ್ನಟ್ಟಿದ ದುಷ್ಕರ್ಮಿಗಳು ಮೀನಿನ ಪಿಕ್ ಅಪ್ ವಾಹನದಲ್ಲಿ, ಸುಹಾಸ್ ಶೆಟ್ಟಿಯ ಇನ್ನೋವಾ ಕಾರನ್ನು ಅಡ್ಡಕಟ್ಟಿದ್ದಾರೆ. ಆ ಸಂಧರ್ಭ ಸುಹಾಸ್ ಶೆಟ್ಟಿ ಚಲಾಯಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಅಲ್ಲೇ ಇದ್ದ ಹೇರ್ ಕಟ್ಟಿಂಗ್ ಸಲೂನ್ ಗೆ ನುಗ್ಗಿದೆ. ಈ ವೇಳೆ ಗಾಡಿಯಲ್ಲಿ ಸುಹಾಸ್ ಶೆಟ್ಟಿ ಇಳಿಯುವಾಗ 4 ರಿಂದ 5 ಜನರ ಯುವಕರ ತಂಡ ಆತನನ್ನು ಬೆನ್ನತ್ತಿಕೊಂಡು ಹೋಗಿ ತಲವಾರಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಹತ್ಯೆ ನಡೆಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸುಹಾಸ್ ಶೆಟ್ಟಿ ಅವರು ತಮ್ಮ ಸ್ನೇಹಿತರಾದ ಸಂಜಯ್, ಪ್ರಜ್ವಲ್q, ಅನ್ವಿತ್, ಲತೀಶ್ ಮತ್ತು ಶಶಾಂಕ್ ಅವರೊಂದಿಗೆ ಕಾರಿನಲ್ಲಿ (KA-12-MB-3731) ಪ್ರಯಾಣಿಸುತ್ತಿದ್ದರು. ಈ ವೇಳೆ ಸ್ವಿಫ್ಟ್ ಕಾರು ಮತ್ತು ಪಿಕಪ್ ವಾಹನದಲ್ಲಿ ಬಂದ ಐದರಿಂದ ಆರು ಮಂದಿ ದುಷ್ಕರ್ಮಿಗಳ ಗುಂಪು ಅವರನ್ನು ಅಡ್ಡಗಟ್ಟಿದೆ.
ನಂತರ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಸುಹಾಸ್ ಶೆಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಮಂಗಳೂರು ನಗರ ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
2022ರಲ್ಲಿ ನಡೆದ ಫಾಝಿಲ್ ಕೊಲೆ ಪ್ರಕರಣ ಸಹಿತ ಸುಹಾಸ್ ಶೆಟ್ಟಿ ವಿರುದ್ಧ 2 ಕೊಲೆ ಪ್ರಕರಣಗಳು ಇದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಹತ್ಯೆ ಮಾಡಲಾಗಿತ್ತು. ಇದೀಗ ಫಾಝಿಲ್ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ.
ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ತಲವಾರು ದಾಳಿ ನಡೆಸಿದ್ದು ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಕೊಚ್ಚಿ ಕೊಚ್ಚಿ ಕೊಂದು ಹಾಕಿದ್ದಾರೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ.
ಹಲವು ಕೊಲೆ, ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಮೃತದೇಹ ಎ.ಜೆ.ಆಸ್ಪತ್ರೆಯಲ್ಲಿದೆ. ಎ.ಜೆ.ಆಸ್ಪತ್ರೆ ಮುಂಭಾಗ ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಆಸ್ಪತ್ರೆಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ಭರತ್ ಶೆಟ್ಟಿ ಮತ್ತು ಹಿಂದೂ ಸಂಘಟನೆ ನಾಯಕರ ಆಗಮಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಎದುರು ಬಿಗು ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.


