ಮನುಷ್ಯ ನಿರ್ವಹಿಸುವ ಅನೇಕ ವೃತ್ತಿಗಳಲ್ಲಿ ರಾತ್ರಿ ಹಗಲು ಎನ್ನದೆ ಪರರ ಸೇವೆಗೈಯ್ಯುವ ದಾದಿಯರ ವೃತ್ತಿ ಕೂಡಾ ಒಂದು. ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಈ ಕಾಯಕದಲ್ಲಿ ತೊಡಗಿಕೊಂಡಿರುವ ದಾದಿಯರಿಗೆ ಇಂದು ಅವರ ದಿನದ ಸಂಭ್ರಮ. ಶುಶ್ರೂಷೆ, ಮಾನವೀಯತೆ, ಆರೈಕೆಗೆ ಮತ್ತೊಂದು ಹೆಸರೇ ಅವರು.
ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ವಿಶ್ವ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ. ೧೮೫೪ರ ಕ್ರೈಮನ್ ಯುದ್ಧದಲ್ಲಿ ಗಾಯಗೊಂಡ ಸೇನಾನಿಗಳ ಆರೈಕೆ ಮಾಡಿ ಜಗತ್ತಿನಾದ್ಯಂತ ಗೌರವ ಪಡೆದ ಅನುಭವಿ ದಾದಿ ಇವರು.
ಇವರ ಹೆಸರಿನಲ್ಲಿ ಇಂದಿಗೂ ನರ್ಸಿಂಗ್ ಕ್ಷೇತ್ರದಲ್ಲಿ ಅಮೋಘವಾಗಿ ಸೇವೆ ನೀಡಿದ ದಾದಿಯರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬ ಮನುಷ್ಯನ ಆರೋಗ್ಯ ನಿರ್ವಹಣೆಯಲ್ಲೂ ಇವರ ಪಾತ್ರ ಮಹತ್ತರವಾದದ್ದು. ಆಪರೇಷನ್ ಮಾಡುವ ಅದೆಷ್ಟೋ ಅನುಭವಿ ವೈದ್ಯರಿಗೂ ಆ ಸಂದರ್ಭ ಹತ್ತಿರ ನರ್ಸ್ ಗಳು ಇರಲೇಬೇಕಾಗುತ್ತದೆ.
ತನ್ನವರು ಎಂಬ ಭಾವನೆಯಲ್ಲಿ ಆರೋಗ್ಯ ಕಾಪಾಡುವ ಅದೇನೇ ಕೆಲಸವಾದರೂ ಆಗದು ಎನ್ನದೆ ಸಂಕೋಚ ಪಡದೆ ಆರೈಕೆ ಮಾಡಿ ನಾವಿದ್ದೇವೆ ಬೇಗ ಹುಷಾರಾಗುತ್ತೀರಿ ಎಂಬ ವಿಶ್ವಾಸದ ಭಾವನೆ ಮೂಡಿಸುವ ಎಲ್ಲಾ ದಾದಿಯರಿಗೂ ವಿಶ್ವ ದಾದಿಯರ ದಿನದ ಶುಭಾಶಯಗಳು..

