ಬಂಟ್ವಾಳ: ಗ್ರಾ.ಪಂ ಮಾಜಿ ಕಾರ್ಯದರ್ಶಿಯಿಂದ ಲಂಚ ಸ್ವೀಕರಿಸುತ್ತಿದ್ದಾಗಲೇ ಬಂಟ್ವಾಳ ತಾಲ್ಲೂಕಿನ ಇಬ್ಬರು ಸಿಬ್ಬಂದಿಗಳನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಡೆದಿದೆ.
ಬಂಟ್ವಾಳದ ಮುಖ್ಯ ಲೆಕ್ಕಿಗ ಭಾಸ್ಕರ್ ಮತ್ತು ಖಜಾನೆಯ ಎಫ್ ಡಿಎ ಬಸವಗೌಡ ಬಂಧಿತ ಆರೋಪಿಗಳು. ಬಂಟ್ವಾಳದ ಗ್ರಾಮ ಪಂಚಾಯತ್ ಒಂದರಲ್ಲಿ ಕಾರ್ಯದರ್ಶಿಯಾಗಿದ್ದ ದೂರುದಾರರು ಅವರ ಗಂಡನ ಮರಣ ಉಪದಾನದ ಬಗ್ಗೆ ಕಚೇರಿಗೆ ಹೋಗಿ ಎರಡು ಬಾರಿ ವಿಚಾರಿಸಿದರೂ ಕೆಲಸ ಆಗಿರಲಿಲ್ಲ.
ಕೆಲಸ ಆಗಬೇಕೆಂದರೆ ಇವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ನಿನ್ನೆ ಈ ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

