ಬಂಟ್ವಾಳ: ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೊಮ್ಮೆ ನೆತ್ತರ ಕೋಡಿ ಹರಿದಿದೆ. ಬಂಟ್ವಾಳದಲ್ಲಿ ನಿನ್ನೆ ನಡೆದ ಪಿಕಪ್ ಚಾಲಕ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಇಬ್ಬರು ಮತ್ತು ಹದಿನೈದು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ನದಿ ಬದಿಯಿಂದ ಪಿಕಪ್ ನಲ್ಲಿ ಮರಳು ಲೋಡ್ ಮಾಡಿ ರಾಜೀವಿ ಎಂಬವರ ಮನೆ ಬಳಿ ಇಳಿಸುವ ಸಮಯ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು ಹದಿನೈದು ಮಂದಿ ಏಕಾಏಕಿ ರೆಹಮಾನ್ ನನ್ನು ವಾಹನದಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ಯದ್ವಾತದ್ವಾ ಕೊಚ್ಚಿ ಕೊಲೆ ಮಾಡಿದ್ದಾರೆ. ತಡೆಯಲು ಬಂದ ನನಗೂ ಮಾರಕಾಸ್ತ್ರಗಳಿಂದ ಗಾಯಗೊಳಿಸಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾದ ಕಲಂದರ್ ಶಾಫಿ ಮಾಹಿತಿ ನೀಡಿದ್ದಾರೆ. ಇವರು ನೀಡಿದ ದೂರಿನ ಆಧಾರದಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಕರಣ ಬೇಧಿಸಲು ಡಿವೈಎಸ್ಪಿ ವಿಜಯಪ್ರಕಾಶ್ ನೇತೃತ್ವದಲ್ಲಿ ಐದು ಪೊಲೀಸ್ ತಂಡಗಳು ರಚನೆಯಾಗಿದೆ ಎಂದು ತಿಳಿದುಬಂದಿದೆ.

