ಕಾಪು: ರಸ್ತೆ ದಾಟಲೆಂದು ನಿಂತಿದ್ದ ಪಾದಚಾರಿಯೋರ್ವನಿಗೆ ರಭಸದಿಂದ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಆತ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ರ ಮಂಗಳೂರು-ಉಡುಪಿ ಏಕಮುಖ ರಸ್ತೆಯ ಮೂಳೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೂಳೂರು ಫಿಶರೀಶ್ ರೋಡ್ ನ ನಿವಾಸಿ, ನಲ್ವತ್ತಾರು ವರ್ಷದ ಧನಂಜಯ ಮೃತ ದುರ್ದೈವಿ. ಇವರು ರಸ್ತೆ ದಾಟಲು ಮೂಳೂರು ಬಾರ್ ನ ಮುಂಭಾಗದಲ್ಲಿ ನಿಂತಿದ್ದಾಗ ಮಂಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ನಂತರ ಆ ಸ್ಥಳದಿಂದ ಲಾರಿ ಚಾಲಕ ವಾಹನ ಸಮೇತ ಕಾಲ್ಕಿತ್ತಿದ್ದಾನೆ.
ದುರಂತ ನಡೆದ ಕೂಡಲೇ ಸ್ಥಳೀಯರು ಧನಂಜಯ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗದೆ ಸಾವನ್ನಪ್ಪಿದ್ದಾನೆ. ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.


