ಬೆಂಗಳೂರು: ಆಗಸ್ಟ್ 15ರಿಂದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯೊಳಪಡುವ ದೇವಾಲಯಗಳಲ್ಲಿ ನೀರಿನ ಬಾಟಲ್ ಸೇರಿದಂತೆ ಯಾವುದೇ ಬಗೆಯ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ನಿಷೇಧ ಹೇರಲಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮುಜುರಾಯಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಸ್ಟ್ 15ರಿಂದ ಪ್ಲಾಸ್ಟಿಕ್ ಮುಕ್ತ ದೇವಾಲಯವನ್ನು ಶುರು ಮಾಡುತ್ತೀವೆ. ಎರಡು ತಿಂಗಳ ಗಡುವು ನೀಡಲಾಗುತ್ತಿದ್ದು ಇದರೊಳಗೆ ಯಾವುದೇ ಪ್ಲಾಸ್ಟಿಕ್ ಪದಾರ್ಥದ ಬಳಕೆಯಿದ್ದರೆ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಹೇಳಿದರು.
ಈ ಬಗ್ಗೆ ಸರ್ಕಾರ ವಿಶೇಷ ಗಮನ ವಹಿಸುತ್ತಿದ್ದು ಅಗಸ್ಟ್ ತಿಂಗಳಿಂದ ಮುಜುರಾಯಿ ಇಲಾಖೆಗೆ ಒಳಪಡುವ ಯಾವುದೇ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಪ್ಲಾಸ್ಟಿಕ್ ಮುಕ್ತ ದೇಗುಲವನ್ನಾಗಿ ಮಾಡಲು ನಿರ್ಧರಿಸಲಾಗಿದೆ.

