ಉಡುಪಿ: ಮದ್ಯ ಸೇವನೆಯ ಚಟವುಳ್ಳ ಗಂಡ ಹಣ ಹಾಳು ಮಾಡುತ್ತಾನೆ. ಮಗಳ ಬಳಿಯಿದ್ದರೆ ಸುರಕ್ಷಿತವಾಗಿರಬಹುದು ಎಂದು ಭಾವಿಸಿ ಆಕೆಯ ಸುಪರ್ದಿಗೆ ಕೊಟ್ಟಿದ್ದ 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಆಕೆ ಮರಳಿ ಕೊಡದೆ ವಂಚಿಸಿರುವ ಬಗ್ಗೆ ತಾಯಿ ಮಲ್ಪೆ ಠಾಣೆಗೆ ದೂರು ನೀಡಿದ್ದಾರೆ.
ಸಂತ್ರಸ್ತ ಮಹಿಳೆಯನ್ನು ಹೂಡೆಯ ಜಮೀಲಾ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ : ಗಂಡನಿಗೆ ಕುಡಿತದ ಚಟವಿದ್ದು ಹಣ ಹಾಳು ಮಾಡುತ್ತಾರೆ ಎಂಬ ಕಾರಣದಿಂದ ಅವರು ತನ್ನ ಬಳಿ ಇದ್ದ ಚಿನ್ನ ಮತ್ತು ಹಣವನ್ನು ತನ್ನ ಮಗಳು ಅಫ್ರೀನ್ ಬಳಿ ಇರಿಸಿಕೊಳ್ಳಲು ಕೊಟ್ಟಿದ್ದರು.
ಆದರೆ ಅಮ್ಮ ನೀಡಿದ್ದ ಹಣವನ್ನು ಮಗಳು ಬಡ್ಡಿಗೆ ಇತರರಿಗೆ ನೀಡಿದ್ದಳು. ಈ ವಿಚಾರ ತಿಳಿದ ತಾಯಿ ಜಮೀಲಾ ಅವರು ಚಿನ್ನ ಮತ್ತು ನಗದನ್ನು ವಾಪಸು ಕೇಳಿದ್ದರು. ಆಗ ಹಣವನ್ನು ಮಾತ್ರ ಮರಳಿಸಿದ ಅಫ್ರೀನ್, ಚಿನ್ನ ತನ್ನ ಗಂಡ ಮೊಹಮ್ಮದ್ ಖುರೇಶ್ ಬಳಿ ಇದೆ ಎಂದು ಹೇಳಿದ್ದಳು. ಮಗಳು ಮತ್ತು ಅಳಿಯ ಇಬ್ಬರೂ ಸೇರಿಕೊಂಡು ನನ್ನ ಚಿನ್ನಾಭರಣವನ್ನು ಮರಳಿಸದೆ ವಂಚನೆ ಮಾಡಿದ್ದಾರೆ ಎಂದು ಜಮೀಲಾ ಅವರು ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

