ಮಂಗಳೂರು: ಬಾಲ್ಕನಿಯಲ್ಲಿ ಬಟ್ಟೆ ಒಣಗಲು ಹಾಕುತ್ತಿದ್ದ ಸಂದರ್ಭ ಆಯ ತಪ್ಪಿ ವಸತಿ ಸಮುಚ್ಚಯದ ಹನ್ನೆರಡನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಮಂಗಳೂರಿನ ಕುತ್ತಾರಿನಲ್ಲಿ ನಡೆದಿದೆ.
ಹತ್ತನೇ ತರಗತಿ ವಿದ್ಯಾರ್ಥಿನಿ ಹಿಬಾ ಐಮನ್ ಮೃತಪಟ್ಟ ದುರ್ದೈವಿ. ಈಕೆ ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿ ವೈದ್ಯ ದಂಪತಿ ಡಾ. ಮುಮ್ತಾಜ್ ಅಹಮದ್ ಮತ್ತು ಖಮರ್ಜಹಾ ಬಾನು ಅವರ ಪುತ್ರಿ.
ಕುತ್ತಾರಿನ ಹದಿನೆಂಟು ಮಹಡಿಯಿರುವ ಫ್ಲ್ಯಾಟ್ ನಲ್ಲಿ ಇವರು ವಾಸವಾಗಿದ್ದರು. ದಂಪತಿ ನಿನ್ನೆ ರಾತ್ರಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಸೋದರ ಮತ್ತು ಹಿಬಾ ಇಬ್ಬರೇ ಇದ್ದರು. ಬಾಲ್ಕನಿಯಲ್ಲಿ ಕುರ್ಚಿ ಇಟ್ಟು ಬಟ್ಟೆ ಒಣಗಿಸಲು ಹಾಕುತ್ತಿದ್ದಾಗ ಆಯತಪ್ಪಿ ಬಿದ್ದು ಈ ದುರ್ಘಟನೆ ನಡೆದಿದೆ.

