ಆಧುನಿಕ ಕಾಲಘಟ್ಟದಲ್ಲಿ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸೋದು ಅತೀ ಅವಶ್ಯಕವಾಗಿ ಬಿಟ್ಟಿದೆ. ಬದಲಾದ ಆಹಾರ ಮತ್ತು ಜೀವನಶೈಲಿಯಿಂದ ಹೊಸ ಹೊಸ ಬಗೆಯ ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಆರೋಗ್ಯದ ವಿಚಾರದಲ್ಲಿ ಅಲರ್ಟ್ ಆಗಿರಬೇಕು. ಒಂದು ಸಣ್ಣ ನಿರ್ಲಕ್ಷ್ಯತನವೂ ಬಹು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು.
ಪಾರ್ಶ್ವವಾಯು ಅನ್ನುವಂತದ್ದು ಮಹಿಳೆಯರನ್ನು ಮತ್ತು ಪುರುಷರನ್ನು ಕಾಡುವಂತಹ ಒಂದು ಗಂಭೀರವಾದ ಖಾಯಿಲೆ..ಆದರೆ ಅಧ್ಯಯನದ ಪ್ರಕಾರ ಮಹಿಳೆಯರು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುತ್ತಿದೆ. ಆಂಗ್ಲ ಭಾಷೆಯಲ್ಲಿ ಸ್ಟ್ರೋಕ್ ಎಂದು ಕರೆಯಲ್ಪಡುವ ಈ ತೊಂದರೆ ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆ, ಗರ್ಭಧಾರಣೆ ಮತ್ತು ಋತುಬಂಧಕ್ಕೆ ಸಂಬಂಧಿಸಿದ ಅಪಾಯಕಾರಿ ಅಂಶಗಳಲ್ಲಿ ಕೂಡಾ ಕಂಡುಬರಬಹುದು.
ಹಾಗಾದರೆ ಮಹಿಳೆಯರಿಗೆ ಈ ಪಾರ್ಶವಾಯು ಸಮಸ್ಯೆಯ ಲಕ್ಷಣಗಳು ಹೇಗೆ ಗೊತ್ತಾಗುತ್ತೆ…? ಮೊದಲನೆಯದಾಗಿ ಹೇಳೋದಾದರೆ ಮಹಿಳೆಯರಲ್ಲಿ ಕಂಡುಬರುವ ಸ್ಟ್ರೋಕ್ ಗಳಲ್ಲಿ ಕೂಡಾ ಅನೇಕ ವಿಧಗಳಿವೆ. ಅದರಲ್ಲಿ ಬ್ರೈನ್ ಸ್ಟ್ರೋಕ್ ಎನ್ನುವಂತದ್ದು ಅತೀ ಪ್ರಮುಖವಾದದ್ದು.
ಇದರ ಲಕ್ಷಣಗಳೆಂದರೆ:-
- ಮಾತನಾಡಲು ಅಥವಾ ಅರ್ಥ ಮಾಡಿಕೊಳ್ಳಲು ತೊಂದರೆಯಾಗುತ್ತದೆ. ಮಾತುಗಳು ಅಸ್ಪಷ್ಟ ಅಥವಾ ತೊದಲುವಿಕೆಯ ರೀತಿ ಇರುತ್ತದೆ. ಇದು ಪಾರ್ಶ್ವವಾಯುವಿನ ಸಂಕೇತ.
- ವಿಪರೀತ ತಲೆನೋವು ಸಮಸ್ಯೆ ಕಾಡಬಹುದು. ಅದೇನು ಮಾಡಿದರೂ ಸಹಿಸಲಾಗದಷ್ಟು ತಲೆನೋವಿದ್ದರೆ ನಿರ್ಲಕ್ಷಿಸುವುದು ಬೇಡ.
- ಮಹಿಳೆಯರ ಮುಖ, ತೋಳು, ಕಾಲುಗಳಲ್ಲಿ ದಿಢೀರ್ ಮರಗಟ್ಟುವಿಕೆಯಂತಹ ಅನುಭವ ಆದರೆ ಕೂಡಾ ಎಚ್ಚರಿಕೆ ಅಗತ್ಯ. ಅಥವಾ ನರ ದೌರ್ಬಲ್ಯ ಕೂಡಾ ಪಾರ್ಶ್ವವಾಯುವಿನದ್ದೇ ಲಕ್ಷಣವಾಗಿರುತ್ತದೆ
- ಕಾಲಕ್ರಮೇಣ ದೃಷ್ಟಿ ಮಂಜಾಗುವುದು, ಎದುರಿರುವ ವಸ್ತುಗಳು ಎರಡು ಇದ್ದಂತೆ ಭಾಸವಾಗೋದು, ದೃಷ್ಟಿ ನಷ್ಟವಾಗೋದು, ತಲೆ ತಿರುಗುವಿಕೆ, ನಡೆದಾಡಲೂ ಕೂಡಾ ತೊಂದರೆಯಾಗುವುದು, ಇತರರನ್ನು ಅವಲಂಬಿಸುವುದು ಇವೆಲ್ಲವೂ ಬ್ರೈನ್ ಸ್ಟ್ರೋಕ್ ನ ಲಕ್ಷಣವಾಗಿದೆ.
- ಪಾರ್ಶ್ವವಾಯು ಬಂದ ವ್ಯಕ್ತಿ ಎಲ್ಲಾ ವಿಚಾರಗಳಲ್ಲೂ ಗೊಂದಲಕ್ಕೀಡಾಗುತ್ತಾರೆ. ಒಮ್ಮೆಲೆ ಆಶ್ಚರ್ಯಚಕಿತರಾಗುತ್ತಾರೆ. ಪ್ರಸ್ತುತ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಚಡಪಡಿಸುತ್ತಾರೆ.
ಮೇಲಿನ ಈ ಎಲ್ಲಾ ಲಕ್ಷಣಗಳು ಪ್ರಾಥಮಿಕ ಹಂತದಲ್ಲೇ ನಿಮ್ಮ ಅನುಭವಕ್ಕೆ ಬಂದರೆ ನಿರ್ಲಕ್ಷಿಸದೆ ಸೂಕ್ತ ತಜ್ಞರನ್ನು ಭೇಟಿಯಾಗೋದು ಉತ್ತಮ. ಮಹಿಳೆಯರು ಇದನ್ನು ನೆಗ್ಲೆಟ್ ಮಾಡಿದ್ರೆ ದೊಡ್ಡ ಅಪಾಯವೊಂದಕ್ಕೆ ಆಹ್ವಾನ ನೀಡಿದಂತಾಗುವುದರಲ್ಲಿ ಸಂದೇಹವಿಲ್ಲ…

