ಇತ್ತೀಚಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಮನುಷ್ಯ ಯಾಂತ್ರಿಕ ಬದುಕು ನಡೆಸುತ್ತಿದ್ದಾನೆ. ಐಟಿಬಿಟಿ ಕಂಪೆನಿಗಳಲ್ಲಿ ದುಡಿಯುವವರಿಂದ ಹಿಡಿದು ಪ್ರತಿಯೊಬ್ಬರೂ ದೇಹ ಬಗ್ಗಿಸಿ ದುಡಿಯೋದು ಕಡಿಮೆಯಾಗಿದೆ. ಮುಕ್ಕಾಲು ಭಾಗ ಕುರ್ಚಿಯಲ್ಲೇ ಕೂತು ದಿನ ಕಳೆಯುತ್ತೇವೆ. ದೇಹಕ್ಕೆ ಚಟುವಟಿಕೆ ನೀಡದೆ ಜೀವನಶೈಲಿಯ ಬದಲಾವಣೆಯಿಂದ ಸಣ್ಣ ಪ್ರಾಯದಲ್ಲೇ ಬೆನ್ನುನೋವಿನಂತಹ ಸಮಸ್ಯೆಯನ್ನು ಸ್ವೀಕರಿಸಿ ಬಿಡುತ್ತೇವೆ. ಹಾಗಾದರೆ ಇದಕ್ಕೆ ಯೋಗದ ಮುಖೇನ ಏನು ಪರಿಹಾರ ಸಿಗುತ್ತೆ..? ಯಾವುದೇ ಚಿಕಿತ್ಸೆ ಪಡೆಯದೆ ಕೇವಲ ಯೋಗದ ಮೂಲಕ ಬೆನ್ನುನೋವಿನ ಸಮಸ್ಯೆ ಪರಿಹಾರವಾಗುತ್ತಾ..?
ಮೊದಲನೆಯದಾಗಿ ಸಣ್ಣ ಪ್ರಾಯದಲ್ಲೇ ಬೆನ್ನು ನೋವು ಅಥವಾ ಮಧ್ಯ ವಯಸ್ಕರಲ್ಲೂ ಈ ಸಮಸ್ಯೆ ಕಾಡಲು ಪ್ರಮುಖ ಕಾರಣ ಮಾನಸಿಕ ಒತ್ತಡ, ಅತಿಯಾದ ಬೊಜ್ಜು, ಬದಲಾದ ಜೀವನ ಶೈಲಿ, ಆಹಾರ ಪದ್ಧತಿ. ನಾವು ಯಾವುದೇ ಕೆಲಸ ಮಾಡುವಾಗಲೂ ಮೊದಲು ಕುಳಿತುಕೊಳ್ಳುವ ಭಂಗಿ ಸರಿಯಾಗಿರಬೇಕು. ಇದು ಪ್ರಾಥಮಿಕ ಹಂತ. ಇಲ್ಲಿಂದಲೇ ನಾವು ಅನುಸರಿಸಬೇಕಾದ ಕೆಲವು ವಿಧಾನಗಳು ಮತ್ತು ಯೋಗಾಸನಗಳಿವೆ…
ಸ್ನಾಯುಗಳ ಸೆಳೆತದಿಂದಲೋ ಅಥವಾ ಈ ಮೇಲೆ ತಿಳಿಸಿದ ಇನ್ನಿತರ ಕಾರಣಗಳಿಂದ ಬೆನ್ನು ನೋವು ತೊಂದರೆಯನ್ನು ಎದುರಿಸುತ್ತಿರುತ್ತೇವೆ. ಅದಕ್ಕಾಗಿ ಮೊದಲು ನಮ್ಮ ಜೀವನಶೈಲಿಯಲ್ಲಿ ಅದೆಷ್ಟೇ ಒತ್ತಡ, ಬ್ಯುಸಿ ಕೆಲಸವಿದ್ದರೂ ಪಕ್ಕಕ್ಕಿಟ್ಟು ದಿನದಲ್ಲಿ ಒಂದು ಅರ್ಧ ಗಂಟೆ ಯೋಗ, ಧ್ಯಾನ, ವಾಕಿಂಗ್ ಗೆ ಸಮಯ ನೀಡಬೇಕು. ಇದರಿಂದ ದೇಹದ ಸ್ನಾಯುಗಳು ಅಲರ್ಟ್ ಆಗಿ ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ಕೋರ್ ಸ್ನಾಯುಗಳು ಇಂಪ್ರೂವ್ ಆಗಲು ನಾವು ದೇಹಕ್ಕೆ ಏನಾದರೊಂದು ಚಟುವಟಿಕೆ ನೀಡುತ್ತಿರಬೇಕು.
ಮಾನಸಿಕ ಒತ್ತಡ ಮತ್ತು ಬೆನ್ನುನೋವಿನ ಸಮಸ್ಯೆ ನಿಯಂತ್ರಣಕ್ಕೆ ಬರಲು ಶಶಂಕಾಸನ, ಭುಜಂಗಾಸನ, ಏಕಪಾದ ಉತ್ಕಟಾಸನ, ಉಷ್ಟ್ರಾಸನ ಹೀಗೆ ಹಲವಾರು ಆಸನಗಳು ಸಹಕರಿಸುತ್ತದೆ. ಮೂಳೆಗಳು ಕೂಡಾ ಬಲಯುತವಾಗುತ್ತದೆ. ಮಾನಸಿಕ ಶಾಂತಿಯನ್ನು ಕಾಯ್ದುಕೊಳ್ಳುವುದು ಕೂಡಾ ಅತೀ ಮುಖ್ಯ. ಮಾನಸಿಕ ಸ್ಥಿತಿ ಕೂಡಾ ದೇಹದ ಮೇಲೆ ಪ್ರಭಾವ ಬೀರುತ್ತದೆ.
ಈ ಎಲ್ಲಾ ಆಸನಗಳನ್ನು ಪ್ರತಿದಿನ ಕಟ್ಟುನಿಟ್ಟಾಗಿ ಮಾಡಿದ್ದಲ್ಲಿ ಮತ್ತು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಲ್ಲಿ ಕ್ರಮೇಣ ನಾವು ಬೆನ್ನುನೋವಿಗೆ ಮುಕ್ತಿ ನೀಡಬಹುದು.

