ಉಡುಪಿ: ಸರ್ಕಾರಿ ಇಲಾಖೆಗಳು ಎಂದ ಮೇಲೆ ಜನಸಾಮಾನ್ಯರ ಸಮಸ್ಯೆಗಳಿಗೆ ಅತ್ಯಂತ ಶೀಘ್ರವಾಗಿ ಪರಿಹಾರ ನೀಡುವತ್ತ ಗಮನ ಹರಿಸಬೇಕು. ಆದರೆ ಇಲಾಖೆಗಳಿಗೆ ಸೂಕ್ತವಾದ ಸಿಬ್ಬಂದಿಗಳೇ ಇಲ್ಲವಾದರೆ ಹೇಗೆ..? ಉಡುಪಿ ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇಲಾಖೆಯ ಮುಖ್ಯಸ್ಥರೇ ಪ್ರಭಾರಿಗಳಾಗಿರೋದು ಆಡಳಿತ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ.
ಪ್ರಭಾರಿಗಳಿಗೆ ಮೂಲ ಇಲಾಖೆಯ ಜೊತೆಗೆ ಉಸ್ತುವಾರಿ ಇಲಾಖೆಯ ಹೊಣೆ ಇರುವುದರಿಂದ ಎರಡೂ ಇಲಾಖೆಗಳನ್ನು ಏಕಕಾಲದಲ್ಲಿ ನಿಭಾಯಿಸುವುದು ಕಷ್ಟಸಾಧ್ಯ. ಕೆಲವು ಅಧಿಕಾರಿಗಳಿಗೆ ಮೂರು ಇಲಾಖೆಗಳ ಉಸ್ತುವಾರಿ ವಹಿಸಲಾಗಿದ್ದು ಎಲ್ಲವನ್ನೂ ನಿಭಾಯಿಸುವಲ್ಲಿ ಎಡವುತ್ತಿದ್ದಾರೆ.
ಜಿಲ್ಲಾ ಪಂಚಾಯತ್ ನಿಂದ ಹಿಡಿದು ಬೇರೆ ಬೇರೆ ಇಲಾಖೆಗಳಲ್ಲೂ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡದ ಕಾರಣ ಸಮಸ್ಯೆ ಆರಂಭವಾಗಿ ಬಿಟ್ಟಿದೆ. ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅನೇಕ ದೂರುಗಳು ಬರುತ್ತಿದ್ದು ಆದಷ್ಟು ಶೀಘ್ರವಾಗಿ ಪರಿಹರಿಸುವಂತೆ ಜನಸಾಮಾನ್ಯರು ಒತ್ತಾಯಿಸಿದ್ದಾರೆ.

