ಮಂಗಳೂರು: ಬ್ಯಾಂಕ್ ನ ನಿವೃತ್ತ ಉದ್ಯೋಗಿಯೊಬ್ಬರು ತಾನು ಕೆಲಸ ನಿರ್ವಹಿಸಿದ್ದ ಬ್ಯಾಂಕ್ ನಲ್ಲೇ ಆತ್ಮಹತ್ಯೆಗೆ ಶರಣಾದ ಆಶ್ಚರ್ಯಕರ ಘಟನೆ ಮಂಗಳೂರಿನ ರಾಮಭವನ ಕಾಂಪ್ಲೆಕ್ಸ್ ನ ನೆಲ ಮಹಡಿಯ ಕೆನರಾ ಬ್ಯಾಂಕ್ ನ ಸ್ಟೋರ್ ರೂಮ್ ನಲ್ಲಿ ನಡೆದಿದೆ.
ಅಳಕೆ ನಿವಾಸಿ ಅರ್ವತ್ತು ವರ್ಷದ ಗಿರಿಧರ್ ಯಾದವ್ ಮೃತ ದುರ್ದೈವಿ. ಇವರು ಕೊಡಿಯಾಲ್ ಬೈಲ್ ಕೆನರಾ ಬ್ಯಾಂಕ್ ನಲ್ಲಿ ಸುಮಾರು 40 ವರ್ಷಗಳ ಕಾಲ ಅಟೆಂಡರ್ ಆಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ನಿವೃತ್ತಿ ಹೊಂದಿದ್ದು ಬ್ಯಾಂಕ್ ನ ಮೇಲಿನ ಪ್ರೀತಿಗೆ ಪ್ರತಿದಿನ ಬ್ಯಾಂಕ್ ಗೆ ಬಂದು ಹೋಗುತ್ತಿದ್ದರು.
ಅದೇ ರೀತಿ ನಿನ್ನೆ ಕೂಡಾ ಬ್ಯಾಂಕ್ ಗೆ ಬಂದವರು ಮತ್ತೆ ಮನೆಗೆ ಹಿಂದಿರುಗಿರಲಿಲ್ಲ. ಈ ಹಿನ್ನೆಲೆ ಗಿರಿದರ್ ಅವರ ಪತ್ನಿ ಬಂದರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತಂತೆ ದೂರು ದಾಖಲಿಸಿದ್ದರು ಎಂದು ಹೇಳಲಾಗಿದೆ. ಆದರೆ ಇಂದು ಬೆಳಿಗ್ಗೆ ಬ್ಯಾಂಕ್ ಡೋರ್ ಓಪನ್ ಮಾಡಿದಾಗ ಸ್ಟೋರ್ ರೂಂನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗಿರಿಧರ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆಂದು ಹೇಳಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

