ಮಂಗಳೂರು: ಪೊಲೀಸ್ ಇಲಾಖೆಯ ಕಠಿಣ ಕ್ರಮದಿಂದ ದ.ಕ ಜಿಲ್ಲೆಯಲ್ಲಿ ಕೆಂಪುಕಲ್ಲು ಕೋರೆ ಬಂದ್ ಆಗಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದ.ಕ ಜಿಲ್ಲಾ ಕೆಂಪು ಕಲ್ಲು ಕೋರೆ ಹಾಗೂ ಲಾರಿ ಮಾಲಕರ ಒಕ್ಕೂಟ ರೊಚ್ಚಿಗೆದ್ದಿದ್ದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ನಾಳೆ ನಡೆಯುವ ಕೆಡಿಪಿ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಜುಲೈ ಮೂರರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ ತೆಗೆದುಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ಕನಿಷ್ಠ ಹತ್ತು ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ.
ಕೆಂಪು ಕಲ್ಲು ವಲಯದ ಸಾಮರ್ಥ್ಯವನ್ನು ತೋರಿಸುವುದು ಇದೀಗ ಅನಿವಾರ್ಯವಾಗಿದ್ದು ಅನಿವಾರ್ಯವಾದರೆ ಉಪವಾಸ ಸತ್ಯಾಗ್ರಹ ಕೂಡಾ ನಡೆಸಲಾಗುವುದು ಅಥವಾ ನಾವು ಹೈಕೋರ್ಟ್ ಮೆಟ್ಟಿಲೇರಲೂ ಸಿದ್ಧ. ಒಟ್ಟಾರೆ ನಮಗೆ ನ್ಯಾಯ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


