ಮುಲ್ಕಿ: ಅತ್ಯಂತ ಶಾಂತ ಮತ್ತು ಸಾಧು ಸ್ವಭಾವದ, ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಕೃಷ್ಣ ಎಂಬ ಹೆಸರಿನ ಬಸವ ಅನಾರೋಗ್ಯದಿಂದ ಇಂದು ಬೆಳಿಗ್ಗೆ ಸಾವನ್ನಪ್ಪಿದೆ.
ಈ ಬಸವ ಕಳೆದ ಎಂಟು ದಿನಗಳಿಂದ ಆಹಾರ ಸೇವಿಸದೆ, ಮಲಮೂತ್ರ ವಿಸರ್ಜಿಸದೆ ಇದ್ದ ಕಾರಣ ಪಶುವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಂಡುಬರದ ಕಾರಣ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಗುಣಮುಖವಾಗಿದ್ದ ಬಸವ ಇಂದು ಬೆಳಿಗ್ಗೆ ಉಸಿರು ನಿಲ್ಲಿಸಿದ್ದಾನೆ. ಸಾವಿರಾರು ಜನ ಅಂತಿಮ ದರ್ಶನ ಪಡೆದಿದ್ದಾರೆ. ದೇಗುಲದ ಎದುರು ಭಾಗದಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಿ ಬಸವ ಕೃಷ್ಣನನ್ನು ದಫನ ಮಾಡಲಾಯಿತು.


