ಮಂಗಳೂರು: ತರಗತಿ ನಡೆಯುತ್ತಿದ್ದಾಗಲೇ ಜೋರಾದ ಗಾಳಿಗೆ ಶಾಲಾ ಕಟ್ಟಡದ ಹಂಚಿನ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದ ಘಟನೆ ಮಂಗಳೂರು ಹೊರ ವಲಯದ ಪೇಜಾವರದಲ್ಲಿ ನಡೆದಿದೆ.
ಕೆಂಜಾರು ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಹಂಚು ಜಾರುತ್ತಿರುವುದನ್ನು ನೋಡಿದ ಮಕ್ಕಳು ರಪಕ್ಕನೆ ಹೊರಗೆ ಓಡಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.
ಶಾಲೆಯಲ್ಲಿ ಒಟ್ಟು ಇಪ್ಪತ್ತೊಂದು ಮಕ್ಕಳಿದ್ದರು ಎಂದು ತಿಳಿದುಬಂದಿದೆ. ಸ್ಥಳೀಯರೇ ಸೇರಿ ದುರಸ್ಥಿ ಕಾರ್ಯ ಮಾಡಿದ್ದ ಶಾಲೆಗೆ ಮತ್ತೆ ಈ ರೀತಿ ಆಗಿರೋದು ವಿಷಾದನೀಯ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಶಾಲೆಯನ್ನು ಊರವರೇ ಸೇರಿ ನಡೆಸುತ್ತಿದ್ದಾರೆ.


