ಕಾರ್ಕಳ : ಆನ್ಲೈನ್ ಮೂಖಾಂತರ ಹೆಚ್ಚು ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚು ಕಮಿಷನ್ ಪಡೆಯುವ ಆಮಿಷ ನಂಬಿದ ಯುವಕ 15.5 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.
ಕಾರ್ಕಳ ಮೂಲದ ಮಂಗಳೂರಿನಲ್ಲಿ ಸಸಿಹಿತ್ಲುವಿನಲ್ಲಿ ವಾಸವಿದ್ದ ಅಶ್ವಿತ್(34) ಅವರು ವಂಚನೆಗೊಳಗಾಗಿದ್ದಾರೆ.
ಜ.28ರಂದು ಅಶ್ವಿತ್ ಅವರ ವಾಟ್ಸಾಪ್ ಸಂಖ್ಯೆಗೆ ಮೀನಾ ಸಕಾ³ಲ್ ಎಂಬ ಹೆಸರಿನಲ್ಲಿ ವಾಟ್ಸಾಪ್ ಸಂದೇಶ ಬಂದಿದೆ. ಈ ಸಂದೇಶದಲ್ಲಿ ಟೆಲಿಗ್ರಾಮ್ ಆ್ಯಪ್ನಲ್ಲಿ ಎಸ್-ಕಾಯಿನ್ ಇನ್ವೆಸ್ಟ್ಮೆಂಟ್ ಟಾಸ್ಕ್ಗೆ ಸೇರುವಂತೆ ತಿಳಿಸಲಾಗಿತ್ತು. ಅದರಂತೆ ಅಶ್ವಿತ್ ಅವರು ಈ ಆ್ಯಪ್ಗೆ ಸೇರಿ ತಮ್ಮ ಖಾತೆ ವಿವರಗಳನ್ನು ಹಂಚಿಕೊಂಡಿದ್ದಾರೆ.
ಹೆಚ್ಚು ಹಣ ಹೂಡಿಕೆ ಮಾಡಿದರೆ ಹೆಚ್ಚು ಕಮಿಷನ್ ನೀಡುವುದಾಗಿ ವಂಚಕರು ನಂಬಿಸಿದ್ದಾರೆ. ಇದನ್ನು ನಂಬಿದ ಅಶ್ವಿತ್ ಒಂದಿಷ್ಟು ಹಣವನ್ನು ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ ಒಂದಿಷ್ಟು ಹಣಕಾಸಿನ ಲಾಭಾಂಶವನ್ನು ತೋರಿಸಿದ ವಂಚಕರು ಮತ್ತೆ ಹೂಡಿಕೆ ಹೆಚ್ಚಿಸಲು ಪ್ರೇರಣೆ ನೀಡಿದ್ದಾರೆ. ತಮ್ಮ ಮಂಗಳೂರು ಶಾಖೆ ಮಹಾರಾಷ್ಟ್ರ ಬ್ಯಾಂಕ್ನ ಖಾತೆಯಿಂದ ಜನವರಿ ತಿಂಗಳಿನಿಂದ ಜೂನ್ ತಿಂಗಳವರೆಗೆ ಹಂತಹಂತವಾಗಿ 15,52,650 ರೂ. ವರ್ಗಾಯಿಸಿದ್ದಾರೆ.
ಅನಂತರದಲ್ಲಿ ವಂಚಕರು ಇನ್ನೂ ಹೆಚ್ಚಿನ ಹಣ ಹಾಕುವಂತೆ ಕೇಳಿದಾಗ, ಅಶ್ವಿತ್ ತಮ್ಮಲ್ಲಿ ಹಣವಿಲ್ಲ ಎಂದು ತಿಳಿಸಿ, ಈಗಾಗಲೇ ಹೂಡಿಕೆ ಮಾಡಿದ ಹಣವನ್ನು ಮರಳಿ ನೀಡುವಂತೆ ಕೇಳಿದ್ದಾರೆ. ಆಗ ವಂಚಕರು ತೆರಿಗೆ ಪಾವತಿಸಬೇಕು ಎಂದು ಹೇಳಿ ಹಣವನ್ನು ಹಿಂತಿರುಗಿಸಲು ನಿರಾಕರಿಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

