ತುಳುನಾಡು ಅಂದ್ರೆ ಅದು ಸಂಸ್ಕೃತಿಯ ತವರು. ತನ್ನ ಶ್ರೀಮಂತ ಸಂಸ್ಕೃತಿ, ಆಚಾರ ವಿಚಾರ, ನಾಗಾರಾಧನೆ, ದೈವಾರಾಧನೆ, ಧಾರ್ಮಿಕ ಆಚರಣೆ, ನಂಬಿಕೆಗಳಿಗೆ ಪ್ರಸಿದ್ಧಿಯಾದ ಬೀಡು. ಇಲ್ಲಿ ಪ್ರತಿಯೊಂದು ಆಚರಣೆಯನ್ನು ಕೂಡಾ ಶಿಸ್ತುಬದ್ಧವಾಗಿ ಪಾಲಿಸಲಾಗುತ್ತದೆ. ಇಂದು ತುಳುವರಿಗೆ ಆಟಿ ಅಮಾವಾಸ್ಯೆ ವಿಶೇಷ.
ಅಮವಾಸ್ಯೆಯ ದಿನ ಈ ಭಾಗದಲ್ಲಿ ಪಾಲೆದ ಕಷಾಯ ಅಂದರೆ ಹಾಲೆ ಮರದ ತೊಗಟೆಯ ಕಷಾಯ ಕುಡಿಯುವ ಸಂಪ್ರದಾಯವಿದೆ. ಇಂದು ಕರ್ಕಾಟಕ ಅಮವಾಸ್ಯೆ ಆಗಿದ್ದರಿಂದ ಈ ಶುಭ ದಿನದಂದು ಪಾಲೆದ ಕಷಾಯ ಕುಡಿಯುವ ಸಂಪ್ರದಾಯವಿದೆ.
ಆಟಿ ಅಮಾವಾಸ್ಯೆಯಲ್ಲಿ ಬಹುಮುಖ್ಯವಾಗಿ ಹಾಲೆ ಮರದ ಕಷಾಯವನ್ನು ಕುಡಿಯುವುದು ರೂಢಿ. ಆಟಿ ಅಮವಾಸ್ಯೆಯ ದಿನ ಮುಂಜಾನೆ ಬೇಗ ಎದ್ದು, ಔಷಧೀಯ ಮರವಾದ ಹಾಲೆ ಮರದ ತೊಗಟೆಯನ್ನು ತಂದು ಅದರಿಂದ ಕಷಾಯ ಮಾಡಿ, ಆ ಕಷಾಯವನ್ನು ಪ್ರತಿಯೊಬ್ಬರೂ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುತ್ತಾರೆ. ಹಿರಿಯರು ಆಚರಿಸಿಕೊಂಡು ಬಂದ ಇಂತಹ ಆಚರಣೆಗಳನ್ನು ಇಂದಿನ ಕಾಲದ ಜನ ಮೂಢನಂಬಿಕೆಗಳು, ಪೊಳ್ಳು ಆಚರಣೆಗಳು ಎಂದು ದೂರಿದರೂ ಕೂಡಾ ಇಂತಹ ಆಚರಣೆಗಳ ಹಿಂದೆ ಅದರದ್ದೇ ಆದ ವೈಜ್ಞಾನಿಕ ಕಾರಣಗಳಿವೆ.
ಆಟಿತಿಂಗಳಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುತ್ತದೆ. ಈ ಸಂದರ್ಭ ರೋಗರುಜಿನ ಜಾಸ್ತಿ. ಆದ್ದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಯಾವುದೇ ರೀತಿಯ ಹೊಟ್ಟೆ ಸಂಬಂಧಿ ಕಾಯಿಲೆಗಳು ಬಾರದಂತೆ ತಡೆಯಲು ಆಟಿ ಅಮವಾಸ್ಯೆಯ ದಿನದಂದು ಪಾಲೆದ ಕಷಾಯವನ್ನು ಸೇವಿಸುವ ಸಂಪ್ರದಾಯ ರೂಢಿಯಲ್ಲಿದೆ. ಹಿಂದಿನ ಕಾಲದಲ್ಲಿ ವಿಪರೀತ ಮಳೆಗೆ ಅನಾರೋಗ್ಯಕ್ಕೀಡಾದರೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಇರುತ್ತಿರಲಿಲ್ಲ. ಇದೇ ಕಾರಣಕ್ಕೆ ರೋಗಗಳು ಮತ್ತು ಕಾಯಿಲೆಗಳನ್ನು ಹೋಗಲಾಡಿಸಲು ಆಟಿ ಅಮವಾಸ್ಯೆಯ ದಿನ ವಿಶೇಷ ಶಕ್ತಿಯನ್ನು ಪಡೆಯುವ ಪಾಲೆ ಮರದ ತೊಗಟೆಯ ಕಷಾಯ ಮಾಡಿ ಜನ ಸೇವನೆ ಮಾಡುತ್ತಿದ್ದರು. ಅಂದಿನಿಂದ ಆಚರಿಸಿಕೊಂಡು ಬರಲಾಗುತ್ತಿರುವ ಈ ಆಚರಣೆ, ಸಂಪ್ರದಾಯ ಇಂದಿಗೂ ತುಳುನಾಡಿನಲ್ಲಿ ಜೀವಂತವಾಗಿದೆ. ಆಯುರ್ವೇದದಲ್ಲಿ ಕೂಡಾ ಈ ಹಾಲೆ ಮರದ ತೊಗಟೆಯನ್ನು ಚರ್ಮದ ಕಾಯಿಲೆಗಳು, ಮಲೇರಿಯಾ ಜ್ವರ, ಭೇದಿ, ಹಾವು ಕಡಿತ ಇತ್ಯಾದಿ ರೋಗಗಳಿಗೆ ಬಳಸಲಾಗುತ್ತದೆ.
ಆಟಿ ತಿಂಗಳು ಕಳೆದು ಶ್ರಾವಣ ಆರಂಭವಾಗುತ್ತಿದ್ದಂತೆ, ಹಬ್ಬ ಹರಿದಿನಗಳು, ಜಾತ್ರೆ, ಮದುವೆ ಇತ್ಯಾದಿ ಸಂಭ್ರಮಗಳು ಅರಂಭವಾಗುತ್ತದೆ. ಒಟ್ಟಾರೆಯಾಗಿ ತುಳುನಾಡಿನ ಪ್ರತೀ ಸಂಸ್ಕೃತಿಯನ್ನು ನಾವು ಗೌರವಿಸಿ ಆಚರಿಸಿಕೊಂಡು ಹೋದರೆ ಮುಂದಿನ ಪೀಳಿಗೆಯಲ್ಲೂ ನಮ್ಮ ಸಂಸ್ಕೃತಿ ಜೀವಂತಿಕೆಯಾಗಿರುತ್ತದೆ.

