ದ.ಕ/ಉಡುಪಿ: ಕರಾವಳಿ ಭಾಗದಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ತೀವ್ರ ತೆರನಾದ ಗಾಳಿ ಮಳೆ ಮುಂದುವರಿಯಲಿದ್ದು ಇಂದು ಮತ್ತು ನಾಳೆ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಜು.26ರವರೆಗೆ ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿರುವ ಸಾಧ್ಯತೆ ಇದ್ದು ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಲವಾರು ಕಡೆ ತಗ್ಗು ಪ್ರದೇಶಕ್ಕೆ ನೀರು ಹರಿದಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ.
ಉಡುಪಿ, ಉಚ್ಚಿಲ, ಉದ್ಯಾವರ, ಬ್ರಹ್ಮಾವರ, ಕೋಟ, ಕುಂದಾಪುರ, ಕೋಟೇಶ್ವರ, ಬೈಂದೂರು, ಹೆಬ್ರಿ, ಕೊಲ್ಲೂರು ಭಾಗದಲ್ಲಿ ಈ ಧಾರಾಕಾರ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿ ಮಾಡಿದೆ. ಮಳೆಯ ಹಿನ್ನೆಲೆ ಸಾರ್ವಜನಿಕರು ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

