ಉಡುಪಿ : ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ರೆಡ್-ಆರೆಂಜ್ ಅಲರ್ಟ್ಗಳ ನಡುವೆಯೇ ಉಡುಪಿ ಜಿಲ್ಲೆಯಲ್ಲಿ ಬಿರುಸಿನ ಮಳೆ ಸಹಿತ ಬಾರಿ ಸುಂಟರ ಗಾಳಿ ಮುಂದುವರಿದಿದ್ದು, ಜು.27ರ ರಾತ್ರಿ 8:30ರವರೆಗೆ ಅರಬ್ಬೀ ಸಮುದ್ರದಲ್ಲಿ ಭಾರಿ ಅಲೆಗಳ ಎಚ್ಚರಿಕೆಯನ್ನೂ ನೀಡಲಾಗಿದೆ.
ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಿಂದ ಮಂಗಳೂರು ವರೆಗೆ 3.4ಮೀ.ನಿಂದ 3.5ಮೀ. ಎತ್ತರದ ಕಡಲಲೆಗಳು ಜು.26ರವರೆಗೆ ಏಳುವ ಸಾಧ್ಯತೆ ಇದ್ದರೆ, ಉಡುಪಿ ಜಿಲ್ಲೆಯ ಬೈಂದೂರಿನಿಂದ ಕಾಪುವರೆಗೆ 3.7ರಿಂದ 3.8ಮೀ. ಎತ್ತರದ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಜಲಿಯಿಂದ ಭಟ್ಕಳ ದವರೆಗೆ 4.0ರಿಂದ 4.2ಮೀ. ಎತ್ತರ ಅಲೆಗಳು ಜು.27ರ ರಾತ್ರಿ 8:30ರವರೆಗೆ ಅರಬಿಸಮುದ್ರದಲ್ಲಿ ಎದ್ದು ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯಲ್ಲಿ ತಿಳಿಸಿದೆ.

ಆದ್ದರಿಂದ ರಾಜ್ಯದ ಕರಾವಳಿ ತೀರದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ, ಯಾರೂ ಸಮುದ್ರಕ್ಕೆ ಇಳಿಯದಂತೆ, ಮೀನುಗಾರರು, ಮೀನುಗಾರಿಕೆಗಾಗಿ ಕಡಲಿಗೆ ಹೋಗದಂತೆ ಎಚ್ಚರಿಕೆಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಮೂರೂ ದಿನಗಳಲ್ಲಿ ಗಂಟೆಗೆ 40ರಿಂದ 50ಕಿ.ಮೀ. ವೇಗದ ಗಾಳಿಯೂ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆಯಲ್ಲಿ ಹೇಳಲಾಗಿದೆ.
ಈ ನಡುವೆ ಶುಕ್ರವಾರ ಸಂಜೆ ವೇಗದ ಗಾಳಿಯೊಂದಿಗೆ ಧಾರಾಕಾರ ಮಳೆ ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿದೆ. ಬಾರೀ ಗಾಳಿಗೆ ಕುಕ್ಕಿಕಟ್ಟೆಯ ಗ್ರಾಮ ಆಡಳಿತ ಕಚೇರಿಗೆ ಬೃಹತ್ ಮರ ಉರುಳಿ ಬಿದ್ದಿದೆ. ಮಾತ್ರವಲ್ಲದೆ ಇಂದಿರಾನಗರದಲ್ಲಿ ತೆಂಗಿನಮರ ಬಿದ್ದು ಆಟೋ ರಿಕ್ಷಾ ಹಲವು ವಿದ್ಯುತ್ ಕಂಬ ಮತ್ತು ಮನೆಗೆ ಹಾನಿ ಆಗಿದೆ.
ಶುಕ್ರವಾರ ಮುಂಜಾನೆ 8:30ರವರೆಗಿನ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 87ಮಿ.ಮೀ. ಮಳೆ ಸುರಿದಿದೆ. ಬೈಂದೂರು ತಾಲೂಕಿನಾದ್ಯಂತ ಅತ್ಯಧಿಕ ಅಂದರೆ 13.4ಸೆ.ಮೀ. ಮಳೆಯಾದ ವರದಿ ಇದೆ.

ಜಿಲ್ಲೆಯಲ್ಲಿ 30ಕ್ಕೂ ಅಧಿಕ ಮನೆಗಳು ಗಾಳಿ-ಮಳೆಯಿಂದ ಹಾನಿ ಗೊಳಗಾಗಿವೆ. ಬ್ರಹ್ಮಾವರ ತಾಲೂಕು ಗಿಳಿಯಾರಿನ ಸೀತಾರಾಮ ದೇವಾಡಿಗ ಎಂಬವರ ಮನೆ ಸಂಪೂರ್ಣ ಹಾನಿಗೊಂಡಿದ್ದು 2.50 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಿದ್ದರೆ, ಉಪ್ಪೂರು ಗ್ರಾಮದ ಪ್ರಕಾಶ್ ಶೆಟ್ಟಿ ಅವರ ಮನೆಗೆ ಎರಡು ಲಕ್ಷ ರೂ. ನಷ್ಟ ಉಂಟಾದ ವರದಿ ಇದೆ.
ಹೆಬ್ರಿಯಲ್ಲಿ 83.6ಮಿ.ಮೀ., ಕಾರ್ಕಳದಲ್ಲಿ 72.4, ಕಾಪುವಿನಲ್ಲಿ 67.4, ಬ್ರಹ್ಮಾವರದಲ್ವಲಿ 61 ಹಾಗೂ ಉಡುಪಿಯಲ್ಲಿ 50ಮೀ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಬ್ರಹ್ಮಾವರ ತಾಲೂಕಿನ ಚಾಂತಾರು, ಹೆಗ್ಗುಂಜೆ, ಕಾರ್ಕಳ ತಾಲೂಕಿನ ಪಳ್ಳಿ, ಕಾಪು ತಾಲೂಕಿನ ಉಳಿಯಾರಗೊಳಿ, ಕುಂದಾಪುರ ತಾಲೂಕಿನ ಕಂದಾವರ, ಕುಂಭಾಶಿ, ಕುಂದಾಪುರ ಕಸಬ, ಬಸ್ರೂರಿನ ಗುಂಡಿಗೊಳಿ, ಆನಗಳ್ಳಿ, ಬಾದಾಮಿ ಕಟ್ಟೆಗಳಲ್ಲಿ ಮನೆಗಳಿಗೆ ಹಾನಿಯಾದ ವರದಿ ಬಂದಿದ್ದು ನಾಲ್ಕು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

