ನವದೆಹಲಿ, ಅ.5: ಆಧಾರ್ ಕಾರ್ಡ್ನಲ್ಲಿ ಹೆಸರು ತಿದ್ದುಪಡಿ ಅಥವಾ ಬದಲಾವಣೆ ಮಾಡುವ ನಿಯಮಗಳನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಪರಿಷ್ಕರಿಸಿದೆ. ಹೊಸ Standard Operating Procedure (SOP) ಪ್ರಕಾರ, ಹೆಸರಿನ ಸಣ್ಣ ಕಾಗುಣಿತ ದೋಷ, ಮದುವೆ ಅಥವಾ ವಿಚ್ಛೇದನದ ನಂತರದ ಹೆಸರು ಬದಲಾವಣೆ, ಪ್ರಾದೇಶಿಕ ಭಾಷೆಯಲ್ಲಿನ ದೋಷ ಹಾಗೂ ಸಂಪೂರ್ಣ ಹೆಸರು ಬದಲಾವಣೆಗೆ ಪ್ರತ್ಯೇಕ ನಿಯಮಗಳನ್ನು ನಿಗದಿಪಡಿಸಲಾಗಿದೆ.
ಈ ಪರಿಷ್ಕೃತ ನಿಯಮಗಳು ಸೆಪ್ಟೆಂಬರ್ 18ರಿಂದ ಜಾರಿಗೆ ಬಂದಿವೆ. ಹೆಸರು ತಿದ್ದುಪಡಿಗೆ ಅರ್ಜಿ ಸಲ್ಲಿಸುವವರು ತಮ್ಮ ಬದಲಾವಣೆಗೆ ಅನುಗುಣವಾಗಿ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ಹೆಸರಿನ ಸಣ್ಣ ತಿದ್ದುಪಡಿಗೆ ಅವಕಾಶ
ಹೆಸರಿನ ಮೊದಲಕ್ಷರವನ್ನು ವಿಸ್ತರಿಸುವುದು, ಇನಿಷಿಯಲ್ ಸೇರಿಸುವುದು ಅಥವಾ ತೆಗೆದುಹಾಕುವುದು, ಸರ್ನೇಮ್ ಸೇರಿಸುವುದು, ಹೆಸರಿನ ಪದಗಳ ಕ್ರಮ ಬದಲಿಸುವುದು ಹಾಗೂ ಉಚ್ಚಾರಣೆ ಒಂದೇ ರೀತಿಯಲ್ಲಿರುವ ಸಣ್ಣ ಕಾಗುಣಿತ ದೋಷಗಳನ್ನು ಸರಿಪಡಿಸಲು ಅವಕಾಶವಿದೆ. ಇದಕ್ಕಾಗಿ ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ ಸೇರಿದಂತೆ ಮಾನ್ಯ ಗುರುತಿನ ಪುರಾವೆ (PoI) ಸಲ್ಲಿಸಬಹುದು.
ಮದುವೆ ಅಥವಾ ವಿಚ್ಛೇದನದ ಬಳಿಕ ಹೆಸರು ಬದಲಾವಣೆ
ಮದುವೆಯ ನಂತರ ಪತಿಯ ಸರ್ನೇಮ್ ಸೇರಿಸುವುದು ಅಥವಾ ವಿಚ್ಛೇದನದ ಬಳಿಕ ಹೆಸರಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಈ ಸಂದರ್ಭದಲ್ಲಿ ಮಾನ್ಯ ಗುರುತಿನ ಪುರಾವೆಯ ಜೊತೆಗೆ UIDAI ನಿಗದಿಪಡಿಸಿರುವ Annexure-D ನಮೂನೆಯ ಪ್ರಮಾಣಪತ್ರ ಅಥವಾ ಅಫಿಡವಿಟ್ ಹಾಗೂ ವಿವಾಹ ನೋಂದಣಿ ಪ್ರಮಾಣಪತ್ರದಂತಹ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಪ್ರಾದೇಶಿಕ ಭಾಷೆಯಲ್ಲಿನ ಹೆಸರು ತಪ್ಪಿದ್ದರೆ
ಆಧಾರ್ನಲ್ಲಿರುವ ಇಂಗ್ಲಿಷ್ ಹೆಸರು ಸರಿಯಾಗಿದ್ದು, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಮಾತ್ರ ಹೆಸರು ತಪ್ಪಾಗಿ ನಮೂದಾಗಿದ್ದರೆ ಅದನ್ನು ತಿದ್ದುಪಡಿ ಮಾಡಿಕೊಳ್ಳಬಹುದು. ಇದಕ್ಕಾಗಿ ಅಗತ್ಯ ಗುರುತಿನ ಪುರಾವೆಯೊಂದಿಗೆ ನಿಗದಿತ ನಮೂನೆಯ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.
ಸಂಪೂರ್ಣ ಹೆಸರು ಬದಲಾವಣೆಗೆ ಗೆಜೆಟ್ ಅಧಿಸೂಚನೆ ಕಡ್ಡಾಯ
ವ್ಯಕ್ತಿಯೊಬ್ಬರು ತಮ್ಮ ಮೂಲ ಹೆಸರನ್ನೇ ಸಂಪೂರ್ಣವಾಗಿ ಬದಲಿಸಿ ಹೊಸ ಹೆಸರು ಹೊಂದಲು ಬಯಸಿದರೆ, ಕೇಂದ್ರ ಅಥವಾ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಕೃತ ಗೆಜೆಟ್ ಅಧಿಸೂಚನೆ ಕಡ್ಡಾಯವಾಗಿರುತ್ತದೆ. ಗೆಜೆಟ್ ಅಧಿಸೂಚನೆಯ ಜೊತೆಗೆ ಹೊಸ ಹೆಸರನ್ನು ಹೊಂದಿರುವ ಗುರುತಿನ ಪುರಾವೆ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿರುವ ಹೆಸರು ಬದಲಾವಣೆಯ ಜಾಹೀರಾತಿನ ಪ್ರತಿಯನ್ನೂ ಸಲ್ಲಿಸಬೇಕಾಗುತ್ತದೆ.
₹75 ಶುಲ್ಕ; ಆಧಾರ್ ಕೇಂದ್ರಕ್ಕೆ ಭೇಟಿ ಅಗತ್ಯ
ಜನಸಂಖ್ಯಾ ವಿವರಗಳ (Demographic Update) ತಿದ್ದುಪಡಿಗೆ ನಿಯಮಿತವಾಗಿ ₹75 ಶುಲ್ಕ ಅನ್ವಯಿಸುತ್ತದೆ. ಪ್ರಸ್ತುತ myAadhaar ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ವಿಳಾಸ ತಿದ್ದುಪಡಿಗೆ ಮಾತ್ರ ಅವಕಾಶವಿದ್ದು, ಹೆಸರು ತಿದ್ದುಪಡಿಗಾಗಿ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು. ಅಲ್ಲಿ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ.
ಸಾಮಾನ್ಯವಾಗಿ ಆಧಾರ್ನಲ್ಲಿ ಹೆಸರನ್ನು ಜೀವನದಲ್ಲಿ ಗರಿಷ್ಠ ಎರಡು ಬಾರಿ ಬದಲಾಯಿಸಲು ಅವಕಾಶವಿದೆ. ಪರಿಷ್ಕೃತ ನಿಯಮಗಳ ಮೂಲಕ ಹೆಸರು ಬದಲಾವಣೆಯ ಅರ್ಜಿಗಳ ನೈಜತೆಯನ್ನು ಪರಿಶೀಲಿಸುವುದು ಹಾಗೂ ನಕಲಿ ದಾಖಲೆಗಳ ಬಳಕೆಯನ್ನು ತಡೆಯಲು ಹೆಚ್ಚಿನ ಒತ್ತು ನೀಡಲಾಗಿದೆ.

