ಉಡುಪಿ ಜಿಲ್ಲೆಯ ಎಣ್ಣೆಹೊಳೆ ಗ್ರಾಮದವರಾದ ಮುಂಬೈನ ಪೊಲೀಸ್ ಅಧಿಕಾರಿ, ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಗಳಿಸಿದ್ದ ದಯಾ ನಾಯಕ್ ಅವರು ನಿವೃತ್ತರಾಗುತ್ತಿದ್ದು, ನಿವೃತ್ತಿಗೆ ಒಂದು ದಿನ ಮುನ್ನ ಅವರನ್ನು ಸಹಾಯಕ ಪೊಲೀಸ್ ಆಯುಕ್ತರನ್ನಾಗಿ ಭಡ್ತಿ ಮಾಡಲಾಗಿದೆ.
80 ಎನ್ಕೌಂಟರ್ ಮಾಡಿದ ಖ್ಯಾತಿಯ ಜೊತೆ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದ ದಯಾ ನಾಯಕ್ ಅವರು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದರು. ಆದರೆ, ಸಾಕ್ಷ್ಯಗಳ ಕೊರತೆಯಿಂದಾಗಿ ಬಿಡುಗಡೆಯಾಗಿದ್ದರು. ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿದ್ದರೂ ಕಳೆದ 21 ವರ್ಷಗಳಲ್ಲಿ ಅವರ ಪಿಸ್ತೂಲಿನಿಂದ ಒಂದೇ ಒಂದು ಗುಂಡು ಕೂಡ ಸಿಡಿದಿಲ್ಲ. ಕಳೆದ ಬಾರಿ ಅವರು ಗುಂಡು ಹಾರಿಸಿದ್ದು 2004ರಲ್ಲಿ.
ಎನ್ಕೌಂಟರ್ ಸ್ಕ್ವಾಡ್ ನ ಭಾಗವಾಗಿ ದಯಾ ನಾಯಕ್ ಅವರು ತೊಂಬತ್ತರ ದಶಕದಲ್ಲಿ ಮುಂಬೈನ ಭೂಗತ ಪಾತಕಿಗಳಿಗೆ ಸಿಂಹಸ್ವಪ್ನವಾಗಿದ್ದರು. ಅವರು ಎನ್ ಕೌಂಟರ್ ಮಾಡಿರುವ ಪಟ್ಟಿಗಳಲ್ಲಿ ಕುಖ್ಯಾತರಾದ ವಿನೋದ್ ಮಟ್ಕರ್, ರಫೀಕ್ ಡಬ್ಬಾ, ಸಾದಿಕ್ ಕಾಲಿಯಾ ಮತ್ತು ಲಷ್ಕರ್-ಎ-ತೊಯ್ಬಾದ ಹಲವಾರು ಉಗ್ರರು ಕೂಡ ಸೇರಿದ್ದಾರೆ.

