ಉಡುಪಿ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಬೈಂದೂರು ತಾಲೂಕಿನ ರಾಘವೇಂದ್ರ(35) ಶಿಕ್ಷೆಗೆ ಗುರಿಯಾಗಿರುವ ಆರೋಪಿ. 15 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಯ ಸಂಬಂಧಿಯಾಗಿರುವ ಆರೋಪಿ, ಆಕೆಯನ್ನು ಮನೆ ಸಮೀಪದ ಹಾಡಿಗೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹೆತ್ತವರಲ್ಲಿ ಹೇಳಿದ್ರೆ ಹತ್ಯೆ ಮಾಡುವುದಾಗಿ ಬೆದರಿಸಿದ್ದ.
ನಂತರ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿಯೆಂಬುವುದು ಗೊತ್ತಾಗಿದೆ. ನಂತರ ಪ್ರಕರಣ ದಾಖಲಿಸಿ ಪೊಲೀಸರಿಂದ ತನಿಖೆ ನಡೆಸಲಾಗಿತ್ತು. ಇದೀಗ ನ್ಯಾಯಾಲಯ ವಿಚಾರಣೆ ನಡೆಸಿ ಸಾಕ್ಷ್ಯ ಮತ್ತು ಡಿಎನ್ಎ ವರದಿ ಆಧರಿಸಿ ಆರೋಪಿ ತಪ್ಪಿತಸ್ಥನೆಂದು ಸಾಬೀತುಪಡಿಸಿ ಇಪ್ಪತ್ತು ವರ್ಷ ಕಠಿಣ ಜೈಲುಶಿಕ್ಷೆ ಮತ್ತು ಇಪ್ಪತ್ತೈದು ಸಾವಿರ ರೂ ದಂಡ ಮತ್ತು ಸರ್ಕಾರದ ಪರವಾಗಿ ನೊಂದ ಬಾಲಕಿಗೆ ಮೂರು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ.

