ಧರ್ಮಸ್ಥಳ: ಇಲ್ಲಿ ನಡೆದಿದ್ದ ಅಪರಾಧ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿದ ಬೆನ್ನಲ್ಲೇ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. 2000ದಿಂದ 2015ರ ನಡುವೆ ದಾಖಲಾದ ಅಪರಿಚಿತ ಸಾವಿನ ಪ್ರಕರಣಗಳ ಪ್ರಮುಖ ದಾಖಲೆಗಳು ಡಿಲೀಟ್ ಆಗಿರುವ ಮಾಹಿತಿ ತಿಳಿದುಬಂದ ಬೆನ್ನಲ್ಲೇ ಬೆಳ್ತಂಗಡಿ ಪೊಲೀಸರು ಟೀಕೆಗೆ ಗುರಿಯಾಗಿದ್ದಾರೆ.
ಅನಾಮಿಕ ವ್ಯಕ್ತಿಯೋರ್ವ ನೂರಾರು ಶವಗಳನ್ನು ಹೂತಿದ್ದೇನೆ ಎಂದು ದೂರು ನೀಡಿದ ಬೆನ್ನಲ್ಲೇ ಎಸ್ಐಟಿ ತಂಡದಿಂದ ಉತ್ಖನನ ಕಾರ್ಯ ಮುಂದುವರಿದಿದೆ. ಈ ಹಿನ್ನೆಲೆ ಸಾಕ್ಷಿ ನಾಶದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.
ಮರಣೋತ್ತರ ಪರೀಕ್ಷೆಯ ವರದಿಗಳು, ನೋಟಿಸ್ ಗಳು ಮತ್ತು ಮೃತ ವ್ಯಕ್ತಿಗಳ ಗುರುತನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಬಳಸಲಾದ ಫೋಟೋಗಳನ್ನು ಆಡಳಿತಾತ್ಮಕ ಆದೇಶಗಳಿಗೆ ಅನುಗುಣವಾಗಿ ನಾಶಗೊಳಿಸಲಾಗಿದೆ ಎಂದು ಪೊಲೀಸರು ಆರ್ ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ್ದಾರೆ.


