ಕುಂದಾಪುರ: ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗೊಳ್ಳಿ ಪೊಲೀಸ್ ತಂಡ ಆಗಸ್ಟ್ 7ರಂದು ಮಂಗಳೂರಿನ ಕೂಳೂರಿನಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ಅನ್ಸಾರ್ (32)ನನ್ನು ಬಂಧಿಸಿದೆ.
ಗಂಗೊಳ್ಳಿಯ ಬಾಂಬೆ ಬಜಾರ್ ಬಳಿ ರಸ್ತೆ ಬದಿಯಲ್ಲಿ ಮಲಗಿದ್ದ ಹಸುವನ್ನು ಬಲವಂತವಾಗಿ ಕಾರಿನಲ್ಲಿ ತುಂಬಿಸಿ ತೆಗೆದುಕೊಂಡು ಹೋಗಲಾಗಿತ್ತು. ಘಟನೆಯ ನಂತರ, ಆರೋಪಿಗಳನ್ನು ಪತ್ತೆಹಚ್ಚಲು ಗಂಗೊಳ್ಳಿ ಪೊಲೀಸರು ವಿಶೇಷ ತಂಡವನ್ನು ರಚಿಸಿದರು. ಇದೀಗ ಮಂಗಳೂರಿನ ಕೂಳೂರಿನಲ್ಲಿ
ಪೊಲೀಸರು ಮೊಹಮ್ಮದ್ ಅನ್ಸಾರ್ ನನ್ನು ಅಪರಾಧಕ್ಕೆ ಬಳಸಿದ್ದ ಕಾರಿನ ಸಮೇತ ಬಂಧಿಸಿದ್ದಾರೆ.
ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯ ವಿರುದ್ಧ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ 13 ಪ್ರಕರಣಗಳು ದಾಖಲಾಗಿವೆ. ಈ ದನ ಕಳ್ಳತನದಲ್ಲಿ ಭಾಗಿಯಾಗಿರುವ ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


