ಕೇರಳ: ಇಲ್ಲಿನ ಅಲಪ್ಪುಳ ಜಿಲ್ಲೆ ಚಾರುಮ್ಮುಡ್ ಎಂಬಲ್ಲಿ ಸನೋಜ್ ಎಂಬಾತ ಕೆಲಸ ಮುಗಿಸಿ ಪಕ್ಕದ ಜಮೀನಿನ ಕೊಳದಲ್ಲಿ ಮೀನು ಹಿಡಿಯಲು ಹೋಗಿರುತ್ತಾನೆ. ಈತನು ಮೀನು ಹಿಡಿಯುವ ಸಂದರ್ಭದಲ್ಲಿ 900 ಗ್ರಾಂ ತೂಕದ ವರಲ್ ಮೀನು ಸಿಕ್ಕಿದ್ದು, ಖುಷಿಯಿಂದ ಮನೆಗೆ ಬಂದ ಸನೋಜ್ ಪತ್ನಿ ಬಳಿ ಮೀನನ್ನು ಸ್ವಚ್ಛಗೊಳಿಸಿ ಫಿಶ್ ಕರಿ ಮಾಡಲು ಹೇಳಿರುತ್ತಾನೆ. ನಂತರ ಸನೋಜ್ ಪತ್ನಿ ಮೀನನ್ನು ಚಾಕುವಿನಿಂದ ಕತ್ತರಿಸಿದಾಗ ಹೊಟ್ಟೆಯಲ್ಲಿ 2 ಅಡಿ ಉದ್ದದ ನಾಗರಹಾವು ಸಿಕ್ಕಿದೆ.
ನಂತರ ಆ ಹಾವನ್ನು ಹೊರತೆಗೆದು ನೋಡಿದಾಗ ಹಾವಿನ ಚರ್ಮ ಕೊಳೆತ ಸ್ಥಿತಿಯಲ್ಲಿದ್ದು, ತಲೆ ಭಾಗ ಸರಿಯಾಗಿದ್ದ ಕಾರಣ ತಲೆಯ ಮೇಲಿರುವ ವಿಶೇಷ ಪಟ್ಟಿಯನ್ನು ಕಂಡು ಕುಟುಂಬ ಸದಸ್ಯರು ಅದು ನಾಗರಹಾವು ಎಂದು ಗುರುತಿಸಿದ್ದಾರೆ.
ಇದೀಗ ಗ್ರಾಮದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಹಾವಿನ ಸಮೇತ ಮೀನನ್ನು ಕೂಡ ಒಂದು ಗುಂಡಿ ಅಗೆದು ಅದರಲ್ಲಿ ಹೂಳಿದ್ದಾರೆ.


