ಉಡುಪಿ ಜಿಲ್ಲೆಯಲ್ಲಿ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮದ ಭಾಗವಾಗಿ ದೃಷ್ಟಿ ಯೋಜನೆಗೆ ಚಾಲನೆ ದೊರಕಿದೆ.
ಇಂದು ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಐಪಿಎಸ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಯೋಜನೆಯ ಉದ್ದೇಶ — ಜನರೊಂದಿಗೆ ಪೊಲೀಸರ ನೇರ ಸಂಪರ್ಕವನ್ನು ಬಲಪಡಿಸುವುದು ಮತ್ತು ಸಾರ್ವಜನಿಕರ ಭದ್ರತೆಯನ್ನು ವಿಸ್ತರಿಸುವುದು.

ಒಂದು ಠಾಣಾ ವ್ಯಾಪ್ತಿಯಲ್ಲಿ ಸರಾಸರಿ 80 ಸಾವಿರದಿಂದ 1 ಲಕ್ಷ ಜನರು, ಆದರೆ ಕೇವಲ 40ರಿಂದ 60 ಮಂದಿ ಪೊಲೀಸರು ಕರ್ತವ್ಯದಲ್ಲಿದ್ದಾರೆ.
ಹೀಗಾಗಿ, ಪ್ರತೀ ಬೀಟಿನಲ್ಲಿ 80 ರಿಂದ 100 ಮನೆಗಳ Welfare Committee ರಚಿಸಿ, ಅದರಡಿ ಒಬ್ಬ ಖಾಸಗಿ ಸೆಕ್ಯುರಿಟಿ ಗಾರ್ಡ್ ನೇಮಿಸಿ ರಾತ್ರಿ ಗಸ್ತು ನಡೆಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ಈ ಕಮಿಟಿಗಳು ಸ್ಥಳೀಯ ಜನರ ರಕ್ಷಣೆ, ವಯೋವೃದ್ಧರ ಕಾಳಜಿ ಹಾಗೂ ರಾತ್ರಿ ಭದ್ರತೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ.
ಈಗಾಗಲೇ ಉಡುಪಿ ಜಿಲ್ಲೆಯ 14 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಂತಹ ಕಮಿಟಿಗಳನ್ನು ರಚಿಸಿ “ದೃಷ್ಟಿ ಯೋಜನೆ” ಜಾರಿಗೆ ತರಲಾಗಿದೆ.
ಈ ಹೊಸ ಕ್ರಮದ ಮೂಲಕ ಉಡುಪಿ ಪೊಲೀಸರು “ಜನರ ಮನೆ ಬಾಗಿಲಿಗೇ ಪೊಲೀಸ್ ರಕ್ಷಣೆ” ಎಂಬ ಆಶಯವನ್ನು ಮತ್ತಷ್ಟು ಬಲಪಡಿಸಿದ್ದಾರೆ.

