ಕುಂದಾಪುರದಲ್ಲಿ ನಡೆದ ಚಿನ್ನದ ಸರ ಸುಲಿಗೆ ಪ್ರಕರಣವನ್ನು ಪೊಲೀಸರು ಬೆನ್ನಟ್ಟುತ್ತಾ ಕೇವಲ ಕೆಲವು ದಿನಗಳಲ್ಲಿ ಭೇದಿಸಿದ್ದಾರೆ.
ಫಿರ್ಯಾದಿ ಮೀನಾಕ್ಷಿರವರು ಅವರ ಮಗಳು ಜ್ಯೋತಿಯೊಂದಿಗೆ ಕುಂದಾಪುರ KSRTC ಬಸ್ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ್ ಕಡೆ ನಡೆಯುತ್ತಿದ್ದ ವೇಳೆ, BSNL ಕಚೇರಿ ಹತ್ತಿರ ಇಬ್ಬರು ಮೋಟಾರ್ ಸೈಕಲ್ ಸವಾರರು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಿತ್ತು ಪರಾರಿಯಾದರು.


ಈ ದೂರಿನ ಆಧಾರದ ಮೇಲೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿ ಜಯರಾಮ ಡಿ ಗೌಡರವರ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಸಂಜಯ್ ಎಲ್ ಮತ್ತು ವಸಂತ ಕುಮಾರ್ ಅವರನ್ನು ಕ್ರಮವಾಗಿ ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ, ಸ್ಕಾರ್ಪಿಯೋ ಕಾರು ಮತ್ತು ಮೋಟಾರ್ ಸೈಕಲ್ ಸೇರಿ ಒಟ್ಟು 8 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಮತ್ತು ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು ರವರ ಮಾರ್ಗದರ್ಶನದಲ್ಲಿ, ಪಿಎಸ್ಐ ನಂಜಾನಾಯ್ಕ್, ಪುಷ್ಪಾ, ನೂತನ್ ಮತ್ತು ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಕುಂದಾಪುರ ಪೊಲೀಸರ ಚುರುಕಿನ ಕ್ರಮಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

