ಬೆಂಗಳೂರು: ಕನ್ನಡ ಚಿತ್ರರಂಗದ ಖಳನಟ, ಕೆಜಿಎಫ್ ಚಾಚ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ನಿಂದಾಗಿ ನಿಧನರಾಗಿದ್ದಾರೆ.
ಹರೀಶ್ ರಾಯ್ ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹರೀಶ್ ರಾಯ್ ವಿಧಿವಶರಾಗಿದ್ದಾರೆ.

ಉಡುಪಿ ಮೂಲದ ಹರೀಶ್ ರಾಯ್, ಸಿನಿಮಾ ರಂಗಕ್ಕೆ ಬರುವ ಮೊದಲು ಉಡುಪಿಯ ರಥಬೀದಿಯಲ್ಲಿ ಚಿನ್ನದಂಗಡಿ ಇಟ್ಟುಕೊಂಡಿದ್ದರು. ಹರೀಶ್ ರಾಯ್ ಉಡುಪಿಯ ಪ್ರಸಿದ್ಧ ಚಿನ್ನಾಭರಣ ಮಳಿಗೆ ನೋವೆಲ್ಟಿ ಜ್ಯುವೆಲ್ಲರ್ಸ್ ಮಾಲಕರ ಅಕ್ಕ ಮಗ.

ಹರೀಶ್ ರಾಯ್ ಚಿಕಿತ್ಸೆಗೆ ಕೆಜಿಎಫ್ ಸಿನಿಮಾ ಹೀರೋ ಯಶ್ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಹಸ್ತ ಚಾಚಿದ್ದರು. ಕ್ಯಾನ್ಸರ್ ಮಹಾಮಾರಿಯಿಂದ ಹರೀಶ್ ರಾಯ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
90 ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ಖಳ ನಾಯಕನ ಪಾತ್ರದಲ್ಲಿ ಹರೀಶ್ ರಾಯ್ ನಟಿಸಿದ್ದರು. ರಾಜ್ ಬಹದ್ದೂರ್, ನನ್ನ ಕನಸಿನ ಹೂವೆ,ಮೀಂದುಮ್ ಒರು ಕಾದಲ್ ಕಧೈ, ಜೋಡಿ ಹಕ್ಕಿ, ತಾಯವ್ವ, ಅಂಡರ್ ವರ್ಲ್ಡ್, ನಲ್ಲ, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ಸೇರಿದಂತೆ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ಓಂ ಸಿನಿಮಾದಲ್ಲಿ ಡಾನ್ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದ ಹರೀಶ್ ರಾಯ್ ಕೆಜಿಎಫ್ ಸರಣಿಯಲ್ಲಿ ಚಾಚಾ’ ಆಗಿ ಪ್ರಸಿದ್ದರಾಗಿದ್ದರು.
ಹರೀಶ್ ರಾಯ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಹಿರಿಯ ನಟನ ಅಗಲಿಕೆಗೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.
