ಬ್ರಹ್ಮಾವರ: ನಕಲಿ ವಿಲ್ ಮತ್ತು ಮರಣ ಪ್ರಮಾಣ ಪತ್ರ ಸೃಷ್ಟಿಸಿ ಆಸ್ತಿಯ ನೋಂದಾವಣೆಗೆ ತಯಾರಿ ನಡೆಸಿ ವಂಚಿಸಿದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರಾದ ಭಾಸ್ಕರ್ ಶೆಟ್ಟಿ (64),ಮಹಾರಾಷ್ಟ್ರ ಇವರ ತಂದೆ ದಿವಂಗತ ಭುಜಂಗ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದಲ್ಲಿರುವ ಸರ್ವೆ ನಂ. 38/43 ರ 0.23 ಎಕರೆ ವಿಸ್ತೀರ್ಣದ ಜಮೀನಿನ ಮಾಲಿಕರಾಗಿದ್ದು. ಅವರು ದಿನಾಂಕ 06/01/2002 ರಂದು ಮುಂಬೈನಲ್ಲಿ ನಿಧನರಾಗಿರುತ್ತಾರೆ. ಅವರ ನಿಧನದ ನಂತರ ಅವರ ಆಸ್ತಿಗೆ ದೂರುದಾರರು ಹಾಗೂ ಅವರ ಸಹೋದರ ಶ್ರೀಧರ್ ಶೆಟ್ಟಿ ಹಾಗೂ ಸಹೋದರಿ ವಿನೋದಾ ಶೆಟ್ಟಿ ರವರು ಕಾನೂನುಬದ್ಧ ವಾರಸುದಾರರಾಗಿರುತ್ತಾರೆ. ಆ ಸಮಯದಲ್ಲಿ ಆರೋಪಿತೆ ಶ್ರೀಮತಿ ವಿನಯ ವಿ. ಶೆಟ್ಟಿ ಎಂಬುವವರು ದೂರುದಾರರ ತಂದೆಯವರು ದಿನಾಂಕ 19/11/1992 ರಂದು ಬರೆದಿದ್ದಾರೆ ಎನ್ನಲಾದ ನಕಲಿ ವಿಲ್ (ಮರಣ ಶಾಸನ) ಹಾಗೂ ದಿನಾಂಕ 08/11/1993 ರ ನಕಲಿ ಮರಣ ಪ್ರಮಾಣಪತ್ರ ಮತ್ತು ದಿನಾಂಕ 18/11/1992 ರಂದು ದೂರುದಾರರು ಹಾಗೂ ಅವರ ಸಹೋದರ ಸಹೋದರಿಯು ಸಹಿ ಮಾಡಿದ್ದೇವೆ ಎನ್ನಲಾದ ನಕಲಿ ಒಪ್ಪಿಗೆ ಪತ್ರ ಇಟ್ಟು, ಬ್ರಹ್ಮಾವರ ತಾಲೂಕು ತಹಶೀಲ್ದಾರ್ ಅವರಿಗೆ ಆಸ್ತಿಯ ಖಾತೆ ಬದಲಾವಣೆಗಾಗಿ ಅರ್ಜಿಯನ್ನು ಸಲ್ಲಿಸಿರುವುದು ದಿನಾಂಕ 30/10/2025 ರಂದು ದೂರುದಾರರ ಗಮನಕ್ಕೆ ಬಂದಿರುತ್ತದೆ . ದೂರುದಾರರ ತಂದೆಯ ಆಸ್ತಿಯನ್ನು ಅಕ್ರಮವಾಗಿ ಕಬಳಿಸುವ ಏಕೈಕ ಉದ್ದೇಶದಿಂದ ಆರೋಪಿಗಳಾದ 1] ಶ್ರೀಮತಿ ವಿನಯ ವಿ. ಶೆಟ್ಟಿ, 2] ಶಾಂತಾರಾಮ ಹೆಗ್ಡೆ 3] ಸಿ. ಭೋಜ ಶೆಟ್ಟಿ 4] ಚಂದಪ್ಪ ಕಂಚ ಮತ್ತು 5] ಬಿ. ತಿಮ್ಮಪ್ಪ ಹೆಗ್ಡೆ ಎಂಬುವವರು ಸೇರಿಕೊಂಡು ಆಸಕ್ತ ಮತ್ತು ಸಂಬಂಧಿತ ವ್ಯಕ್ತಿಗಳನ್ನು ಫಲಾನುಭವಿಗಳು ಹಾಗೂ ಸಾಕ್ಷಿಗಳಾಗಿ ತೋರಿಸಿ, ಪೂರ್ವ ನಿಯೋಜಿತ ಅಪರಾಧ ಸಂಚಿನ ಭಾಗವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತ್ತು ಅವುಗಳನ್ನು ಅಸಲಿ ಎಂದು ಬಿಂಬಿಸಿ ದೂರುದಾರರ ಕುಟುಂಬಕ್ಕೆ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2026 ಕಲಂ: 465, 468, 471, 420 ಜೊತೆಗೆ 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.


