ಉಡುಪಿ ಜಿಲ್ಲೆಯ ಮಲ್ಪೆಯಿಂದ ಪಾಕಿಸ್ತಾನ ಸಹಿತ ಹಲವು ದೇಶಗಳಿಗೆ ಸೌಕಪಡೆಯ ರಹಸ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದ್ದು , ಈ ಪ್ರಕರಣದಲ್ಲಿ ಕೆಲ ದಿನಗಳ ಹಿಂದೆ ಬಂಧಿತನಾಗಿದ್ದ ಕೇರಳದ ಆಲೀಫ್ ಇಸ್ಲಾಂ ಬಾಂಗ್ಲಾದೇಶದ ನಿವಾಸಿ ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ಬಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಗುಜರಾತ್ ಮೂಲದ ಹೀರೇಂದ್ರ ಕುಮಾರ್, ಉತ್ತರ ಪ್ರದೇಶ ಮೂಲದ ರೋಹಿತ್, ಸಂತ್ರಿ ಹಾಗೂ ಕೆಲವು ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಳ ಮೂಲದ ಆಲಿಫ್ ಇಸ್ಲಾಂ ಎಂಬ ನಾಲ್ವರನ್ನು ಬಂಧಿಸಲಾಗಿತ್ತು. ರೋಹಿತ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು , 6 ತಿಂಗಳಿನಿಂದ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಇನ್ಸುಲೇಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಕೊಚ್ಚಿನ್ ಅಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಂತ್ರಿಯಿಂದ ನೌಕಾಪಡೆಗೆ ಸಂಬಂಧಿಸಿದ ಹಡಗುಗಳ ಸಂಖ್ಯೆಗಳ ಗುಪ್ತಪಟ್ಟಿ ಹಾಗೂ ಇತರ ಗುಪ್ತ ಮಾಹಿತಿಗಳನ್ನು ಸಂಗ್ರಹಿಸಿ ಪಾಕ್ ಸಹಿತ ವಿವಿಧ ದೇಶಗಳಿಗೆ ರವಾನಿಸುತ್ತಿದ್ದ ಎಂಬ ಅಂಶ ತನಿಖೆಯಿಂದ ದೃಢವಾಗಿದೆ.
ಕೇಂದ್ರ ಸರ್ಕಾರದ ಅಡಿ ಬರುವ, ಹಡಗು ಮತ್ತು ಜಲಸಾರಿಗೆ ಇಲಾಖೆಯ ಅಧೀನದಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್ ಮತ್ತು ಅದರ ಅಂಗ ಸಂಸ್ಥೆಯಾದ ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಇಬ್ಬರು ಆರೋಪಿಗಳು ಕೆಲಸ ಮಾಡುತ್ತಿದ್ದು, ಸುಮಾರು ಒಂದೂವರೆ ವರ್ಷದಿಂದ ಮಾಹಿತಿ ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು ಇನ್ನಷ್ಟು ವಿಷಯ ಹೊರಬರುವ ಸಾಧ್ಯತೆ ಇದೆ.

