ಕುಂದಾಪುರ : ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಗ್ವಾಡಿ ಸೇತುವೆ ಕೆಳಗೆ ಚಕ್ರಾ ನದಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾದ ಘಟನೆ ನಡೆದಿದೆ.
ಮೃತರನ್ನು ಭಾಸ್ಕರ ಪೂಜಾರಿ (65) ಎಂದು ಗುರುತಿಸಲಾಗಿದೆ.
ಭಾಸ್ಕರ ಪೂಜಾರಿ ಅವರು ಹುಬ್ಬಳ್ಳಿಯ ಗೋಕುಲ್ ರೋಡ್ನ ಆರ್.ಎಂ. ಲೋಹಿಯಾ ನಗರದಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು.
ಮಾ.11ರಂದು ಬೆಳಿಗ್ಗೆ ಶುಗರ್ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಅವರು ಬಳಿಕ ಮನೆಗೆ ಮರಳಿರಲಿಲ್ಲ. ಈ ಕುರಿತು ಅವರ ಮಗಳು ಸುವರ್ಣ ಅವರು ಸಂಬಂಧಿಕರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಮಾ.12ರಂದು ಮಧ್ಯಾಹ್ನ ದೇವಲ್ಕುಂದ ಗ್ರಾಮದ ಬಗ್ವಾಡಿ ಸೇತುವೆ ಕೆಳಗೆ ಚಕ್ರಾ ನದಿಯಲ್ಲಿ ಒಂದು ಮೃತದೇಹ ತೇಲುತ್ತಿರುವುದಾಗಿ ರವೀಂದ್ರ ಮೊಗವೀರ ಅವರು ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಭಾಸ್ಕರ ಪೂಜಾರಿಯವರ ಶವವೆಂದು ಗುರುತಿಸಲಾಗಿದೆ. ಸೇತುವೆಯ ಮೇಲೆ ಅವರ ಚಪ್ಪಲಿ ಕೂಡ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮೃತ ಭಾಸ್ಕರ ಪೂಜಾರಿಯವರಿಗೆ ಬಿಪಿ, ಶುಗರ್ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದು, ಈ ಕುರಿತು ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಆರೋಗ್ಯ ಸಮಸ್ಯೆಯಿಂದ ಬೇಸರಗೊಂಡು ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

