ಸುಳ್ಯ : ಸಂಚಾರ ನಿಯಮ ಉಲ್ಲಂಘಟನೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಸಮುದಾಯ ಸೇವೆಗೆ ಗುರಿಯಾಗಿದ್ದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸುಳ್ಯದಲ್ಲಿ ರವಿವಾರ ರಾತ್ರಿ ಸಂಭವಿಸಿದೆ.
ಸುಳ್ಯದ ರಕ್ಷಿತ್ ಜಿ.(29) ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ.
ಆತನನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕ ರಕ್ಷಿತ್ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ನ್ಯಾಯಾಲಯದಿಂದ 15 ದಿನಗಳ ಸಂಚಾರ ನಿಯಂತ್ರಣ ಜಾಗೃತಿಯ ಸಮುದಾಯ ಸೇವೆ ಶಿಕ್ಷೆಗೆ ಗುರಿಯಾಗಿದ್ದ. ಅದರಂತೆ ರವಿವಾರ ಒಂದು ದಿನ ಸಮುದಾಯ ಸೇವೆ ಕರ್ತವ್ಯ ನಿರ್ವಹಿಸಿದ್ದನು.
ಈ ಮಧ್ಯೆ ತಾನು ಸಲ್ಲಿಸಿದ ಸಾಮುದಾಯಿಕ ಸೇವೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ಮನೆಯಲ್ಲಿದ್ದಾಗ ಗಮನಿಸಿ ಬೇಸರಗೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

