ಮಂಗಳೂರು: ಬಂದರು ನಗರಿ ಮಂಗಳೂರಿನ ಕಾವೂರು ಪ್ರದೇಶದಲ್ಲಿ ಅತ್ಯಂತ ವಿಚಿತ್ರ ಹಾಗೂ ಆತಂಕಕಾರಿ ಘಟನೆ ಬೆಳಕಿಗೆ ಬಂದಿದ್ದು, ಮೂರು ಮನೆಗಳ ಬಾವಿಗಳಲ್ಲಿ ದಿಢೀರ್ ಡೀಸೆಲ್ ಮಿಶ್ರಿತ ನೀರು ಕಾಣಿಸಿಕೊಂಡಿದೆ. ಪ್ರಯೋಗಾಲಯ ಪರೀಕ್ಷೆಯಲ್ಲಿ ಬಾವಿ ನೀರಿನಲ್ಲಿ ಶೇ.28 ರಷ್ಟು ಡೀಸೆಲ್ ಅಂಶ ಇರುವುದು ದೃಢಪಟ್ಟಿರುವುದು ಸ್ಥಳೀಯರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ಬಾವಿಯ ನೀರನ್ನು ಮೋಟಾರ್ ಮೂಲಕ ಸಂಪೂರ್ಣ ಖಾಲಿ ಮಾಡಿದರೂ, ಕೆಲವೇ ಹೊತ್ತಿನಲ್ಲಿ ಮತ್ತೆ ನೀರಿನೊಂದಿಗೆ ಡೀಸೆಲ್ನ ದಪ್ಪ ಪದರ ಮೇಲೇಳುತ್ತಿರುವುದಾಗಿ ನಿವಾಸಿಗಳು ತಿಳಿಸಿದ್ದಾರೆ. ಇದರಿಂದಾಗಿ ಮನೆ ಬಳಕೆಗೂ ನೀರು ಯೋಗ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಕೂಡ ಎದುರಾಗಿದೆ.
ಪ್ರಭಾವಿತ ಮನೆಗಳ ಸಮೀಪದಲ್ಲೇ ಪೆಟ್ರೋಲ್ ಬಂಕ್ವೊಂದು ಇರುವ ಹಿನ್ನೆಲೆಯಲ್ಲಿ, ಅದರ ಅಂಡರ್ಗ್ರೌಂಡ್ ಟ್ಯಾಂಕ್ನಿಂದ ಡೀಸೆಲ್ ಸೋರಿಕೆ ಆಗಿ ಅಂತರ್ಜಲ ಸೇರಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿ, “ನಮ್ಮ ಡೀಸೆಲ್ ಸ್ಟಾಕ್ನಲ್ಲಿ ಯಾವುದೇ ಕೊರತೆ ಇಲ್ಲ. ಟ್ಯಾಂಕ್ನಿಂದ ಸೋರಿಕೆಯೂ ಆಗುತ್ತಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಇತ್ತ ಬಾವಿ ನೀರು ಬಳಕೆಗೆ ಯೋಗ್ಯವಲ್ಲ ಎಂಬ ವರದಿ ಬಂದಿದ್ದರೂ, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಬಾವಿ ನೀರು ಬಳಕೆಗೆ ಯೋಗ್ಯವಲ್ಲ ಎಂಬ ವರದಿ ಬಂದಿದ್ದರೂ, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡೀಸೆಲ್ ಸೋರಿಕೆಯ ಮೂಲವನ್ನು ತಕ್ಷಣ ಪತ್ತೆಹಚ್ಚಿ, ಅಂತರ್ಜಲ ಮತ್ತಷ್ಟು ಕಲುಷಿತಗೊಳ್ಳುವುದನ್ನು ತಡೆಯಬೇಕು ಎಂದು ಕಾವೂರು ನಿವಾಸಿಗಳು ಆಗ್ರಹಿಸಿದ್ದಾರೆ.

