ಉಡುಪಿ: ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಒಂದು ವಾರಗಳ ಕಾಲ (ದಿನಾಂಕ 30.06.2026 ರಿಂದ 06.07.2026 ರವರೆಗೆ) ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲೆಯಲ್ಲಿ ‘ಆರೆಂಜ್ ಅಲರ್ಟ್’ (Orange Alert) ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಈ ದಿನಗಳಲ್ಲಿ ಭಾರಿ ಗಾಳಿ-ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಸಾರ್ವಜನಿಕರು ಹಾಗೂ ಅಧಿಕಾರಿಗಳ ಸುರಕ್ಷತೆಗಾಗಿ ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ಸಾರ್ವಜನಿಕರಿಗೆ ನೀಡಿರುವ ಪ್ರಮುಖ ಸೂಚನೆಗಳು:
- ಸುರಕ್ಷಿತ ಆಶ್ರಯ: ಮಳೆ, ಗಾಳಿ ಮತ್ತು ಸಿಡಿಲು ಬರುವ ಸಂದರ್ಭದಲ್ಲಿ ಸಾರ್ವಜನಿಕರು, ಮಕ್ಕಳು ಹಾಗೂ ಕಾರ್ಮಿಕರು ಹೊರಗಡೆ ತಿರುಗಾಡದೆ ಕಡ್ಡಾಯವಾಗಿ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು. ರೈತರು ಮಳೆ/ಸಿಡಿಲಿನ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಂದ ದೂರವಿರಬೇಕು.
- ಜಲಮೂಲಗಳಿಂದ ದೂರವಿರಿ: ಮೀನುಗಾರರು, ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ, ನೀರಿರುವ ಪ್ರದೇಶ ಮತ್ತು ಸಮುದ್ರ ತೀರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು.
- ಅಪಾಯಕಾರಿ ಸ್ಥಳಗಳಿಂದ ದೂರವಿರಿ: ಸಾರ್ವಜನಿಕರು ಹಾಗೂ ಮಕ್ಕಳು ಗಾಳಿ-ಮಳೆಯ ಸಮಯದಲ್ಲಿ ಅಪಾಯಕಾರಿ ಮರಗಳು ಅಥವಾ ವಿದ್ಯುತ್ ಕಂಬಗಳ ಹತ್ತಿರ ಸುಳಿಯಬಾರದು. ಮುರಿದು ಬಿದ್ದಿರುವ ವಿದ್ಯುತ್ ತಂತಿಗಳಿಂದ ದೂರವಿರಬೇಕು.
- ದುರ್ಬಲ ಕಟ್ಟಡಗಳ ರಕ್ಷಣೆ: ಹಳೆಯ ಅಥವಾ ದುರ್ಬಲ ಕಟ್ಟಡಗಳ ಹತ್ತಿರ ಅಥವಾ ಮರಗಳ ಕೆಳಗೆ ನಿಲ್ಲಬಾರದು. ಕಟ್ಟಡಗಳ ಮೇಲೆ ಅಪಾಯಕಾರಿಯಾಗಿ ಚಾಚಿಕೊಂಡಿರುವ ಮರದ ರೆಂಬೆ-ಕೊಂಬೆಗಳನ್ನು ಮೊದಲೇ ಕತ್ತರಿಸಿ ತೆರವುಗೊಳಿಸಿ, ಕಟ್ಟಡಗಳನ್ನು ರಕ್ಷಿಸಿಕೊಳ್ಳಬೇಕು.
- ಭೂಕುಸಿತದ ಭೀತಿ – ಕಾಳಜಿ ಕೇಂದ್ರಗಳ ಸ್ಥಾಪನೆ: ಹೆಚ್ಚು ಮಳೆಯಾಗುತ್ತಿರುವುದರಿಂದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಭೂಕುಸಿತ (Landslide) ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ. ಅಂತಹ ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ತಕ್ಷಣವೇ ತಹಶೀಲ್ದಾರ್ ಕಚೇರಿ ಅಥವಾ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಸಂಪರ್ಕಿಸಿ, ಹತ್ತಿರದ ಕಾಳಜಿ ಕೇಂದ್ರಗಳಲ್ಲಿ ಮುಂಜಾಗ್ರತೆಯಾಗಿ ಆಶ್ರಯ ಪಡೆಯಬಹುದು.
- ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ: ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತನ್ನು ಸಮರ್ಥವಾಗಿ ನಿಭಾಯಿಸಲು ಕ್ರಮ ಕೈಗೊಳ್ಳಬೇಕು.
ತುರ್ತು ಸೇವೆಗಳು ಮತ್ತು ಸಹಾಯವಾಣಿ ಸಂಖ್ಯೆಗಳು:
ಯಾವುದೇ ತುರ್ತು ಪರಿಸ್ಥಿತಿ ಅಥವಾ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿ (Control Room) ಅಥವಾ ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ.
- ತುರ್ತು ಸೇವೆಗಳ ಉಚಿತ ಸಂಖ್ಯೆ: 1077
- ಜಿಲ್ಲಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 0820-2574802
ತಹಶೀಲ್ದಾರ್ ಕಚೇರಿಗಳ ಸಹಾಯವಾಣಿ ಸಂಖ್ಯೆಗಳು:
- ಉಡುಪಿ: 0820-2520417
- ಕುಂದಾಪುರ: 08254-230357
- ಕಾರ್ಕಳ: 08258-230201
- ಕಾಪು: 0820-2551444
- ಬ್ರಹ್ಮಾವರ: 0820-2560494
- ಬೈಂದೂರು: 08254-251657
- ಹೆಬ್ರಿ: 08253-250201
- ಉಡುಪಿ ನಗರ ಸಭೆ: 0820-2520306
ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಿ, ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

