ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲಿಗ್ರಾಮ ಸಮೀಪದ ಚಿತ್ರಪಾಡಿ ಗ್ರಾಮದಲ್ಲಿರುವ “Animal Rescue Centre” ವಿರುದ್ಧ ಪ್ರಾಣಿ ಹಿಂಸೆ ಹಾಗೂ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಾಗಿದೆ.
ಆರೋಪಿ ಸುಧೀಂದ್ರ ಐತಾಳ್ ಸಾಲಿಗ್ರಾಮ ಅವರು ನಡೆಸುತ್ತಿದ್ದ ಈ ಕೇಂದ್ರದಲ್ಲಿ ಪ್ರಾಣಿಗಳನ್ನು ಅತ್ಯಂತ ಕಳಪೆ, ಅಮಾನವೀಯ ಹಾಗೂ ಅಪಾಯಕಾರಿ ಪರಿಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು PETA India ಸಂಸ್ಥೆಯ ಮಹೇಶ್ ಉಡುಪ (31) ಅವರು ನೀಡಿದ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ದಿನಾಂಕ 07.07.2026 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ಕೇಂದ್ರದಲ್ಲಿ ನಾಯಿಗಳು ಮತ್ತು ಬೆಕ್ಕುಗಳನ್ನು ಅತೀ ಚಿಕ್ಕ ಹಗ್ಗಗಳಿಂದ ಕಟ್ಟಿಹಾಕಿ ಸಾಕಲಾಗುತ್ತಿದ್ದು, ಅವುಗಳ ಆರೈಕೆ ಹಾಗೂ ಸುರಕ್ಷತೆಯ ಬಗ್ಗೆ ಸಮರ್ಪಕ ಕಾಳಜಿ ವಹಿಸಲಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಕೇಂದ್ರದ ಆವರಣದಲ್ಲಿ ದನದ ಕರುವಿನ ಮೃತದೇಹ ಪತ್ತೆಯಾಗಿದ್ದು, ಅದು ಹಲವು ದಿನಗಳ ಹಿಂದೆಯೇ ಮೃತಪಟ್ಟಿರುವಂತೆ ಕಂಡುಬಂದಿದೆ. ಮೃತದೇಹವನ್ನು ತೆರವುಗೊಳಿಸದೆ ಕೊಳೆಯಲು ಬಿಟ್ಟಿರುವುದು ಕೂಡ ಪರಿಶೀಲನೆ ವೇಳೆ ಕಂಡುಬಂದಿದೆ ಎಂದು ತಿಳಿಸಲಾಗಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 114/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 291 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆಯ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

